
ಉದಯವಾಹಿನಿ,ಯಾದಗಿರಿ: ಉಪಲೋಕಾಯುಕ್ತ ನ್ಯಾಯಮೂರ್ತಿ ಶ್ರೀಯುತ ಕೆ.ಎನ್.ಫಣೀಂದ್ರ ಅವರು ನವೆಂಬರ್ 18 ರಿಂದ ನವೆಂಬರ್ 20 ರ ಅವಧಿಯಲ್ಲಿ ಯಾದಗಿರಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಅಗತ್ಯ ಪೂರ್ವ ಸಿದ್ದತೆಯೊಂದಿಗೆ ಹಾಜರಿರುವಂತೆ ಜಿಲ್ಲಾಧಿಕಾರಿ ಡಾ.ಸುಶೀಲ ಬಿ ಅವರು ಸೂಚಿಸಿದರು.ಉಪಲೋಕಾಯುಕ್ತ ನ್ಯಾಯಮೂರ್ತಿಯವರು ಯಾದಗಿರಿ ಜಿಲ್ಲೆಗೆ ಭೇಟಿ ಹಿನ್ನಲೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.
ಯಾದಗಿರಿ ಜಿಲ್ಲೆಗೆ ಭೇಟಿ ನೀಡಲಿರುವ ಅವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ವಿಚಾರಣೆ ನಡೆಸುವುದರ ಜೊತೆಗೆ ಯಾದಗಿರಿ ಜಿಲ್ಲೆಗೆ ಸಂಬಂಧಪಟ್ಟಂತೆ ವಿವಿಧ ಇಲಾಖೆಗಳಲ್ಲಿ ದಾಖಲಾಗಿ ತನಿಖೆಗೆ ಬಾಕಿ ಇರುವ ದೂರುಪ್ರಕರಣಗಳ ವಿಚಾರಣೆ ಹಾಗೂ ಸಭೆ ನಡೆಸಲಿದ್ದಾರೆ. ಹಾಗಾಗಿ ತಮ್ಮ ಕಚೇರಿಗಳಲ್ಲಿ ಬಾಕಿ ಇರುವ ಎಲ್ಲಾ ಕಡತಗಳನ್ನು, ಸಾರ್ವಜನಿಕರು ಕೊಟ್ಟಂತಹ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಎಲ್ಲಾ ಅಧಿಕಾರಿಗಳು ಅಗತ್ಯ ಪೂರ್ವ ಸಿದ್ದತೆಯೊಂದಿಗೆ ಹಾಜರಿರುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸಿಇಓ ಗರಿಮಾ ಪನ್ವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಶರಣಬಸವರಾಜ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
