ಉದಯವಾಹಿನಿ ದೇವರಹಿಪ್ಪರಗಿ; ತಳವಾರ ಸಮುದಾಯವನ್ನು ಮಹರ್ಷಿ ವಾಲ್ಮೀಕಿ ನಿಗಮದ ಪಟ್ಟಿಯಿಂದ ಹೊರಗಿಟ್ಟು ಸರ್ಕಾರ ದ್ರೋಹ ಮಾಡಿದೆ. ಸರ್ಕಾರ ಕೂಡಲೆ ಸರಿಪಡಿಸಬೇಕು. ಇಲ್ಲದಿದ್ದರೆ ಬರುವಂತ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ತಳವಾರ ಪರಿವಾರ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಶಿವಾಜಿ ಮೆಟಗಾರ ಎಚ್ಚರಿಕೆ ನೀಡಿದ್ದಾರೆ.ಈ ಕುರಿತು ಪಟ್ಟಣದಲ್ಲಿ ಮಂಗಳವಾರದಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾಯಕ,ನಾಯ್ಕಡ, ಉಪಪದಗಳಾದ ತಳವಾರ. ಪರಿವಾರ ಸಮುದಾಯವನ್ನು 2020ರ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರವು ಎಸ್‌.ಟಿ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿತ್ತು. ನಂತರ ಸಮುದಾಯದ ಹೋರಾಟದ ಪರವಾಗಿ ರಾಜ್ಯ ಸರಕಾರ ವಿಳಂಬ ಧೋರಣೆಯಿಂದ 2022 ಮಾರ್ಚ್ 22ರಂದು ಸಮಾಜ ಕಲ್ಯಾಣ ಇಲಾಖೆ ಪ್ರವರ್ಗ-1 ರಿಂದ ಎಸ್ ಟಿ ಮಾನ್ಯತೆಗೆ ಒಳಪಡಿಸಿ ಸುತ್ತೋಲೆ ಹೊರಡಿಸಿದೆ.
ಆಡಳಿತರೂಢ ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರದಿಂದ ನಾಯ್ಕಡ ತಳವಾರರನ್ನು ಮಹರ್ಷಿ ವಾಲ್ಮೀಕಿ ನಿಗಮದಿಂದ ಕೈ ಬಿಡಲಾಗಿದೆ. ಅನಧಿಕೃತವಾಗಿ ನಾಯಕ.ನಾಯ್ಕಡ ಅನ್ನುವ ಮೂಲ ಪದಗಳನ್ನು ವಿಂಗಡಿಸಲಾಗಿ, ನಾಯ್ಕಡ ಹಾಗೂ ತಳವಾರರಿಗೆ ಪರಿಶಿಷ್ಟ ಜಾತಿಯ ಸೌಲಭ್ಯಗಳನ್ನು ಸಿಗದಂತೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.ಸಮುದಾಯದವರಿಗೆ ವೈಯಕ್ತಿಕ ಸಾಲ, ವಾಹನ ಸಾಲ, ಸರ್ಕಾರಿ ಮನೆಗೆ ಅರ್ಜಿ ಹಾಕಲು ಬಾರದಂತೆ ಮಾಡಲಾಗಿದೆ ಹಾಗೂ ಸರ್ಕಾರಿ ಸೇವೆಯಲ್ಲಿ ಇರುವ ನೌಕರರಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡುವಲ್ಲಿ ಅಧಿಕಾರಿಗಳು ಕಾನೂನುಬಾಹಿರ ನಿಯಮವನ್ನು ಸೃಷ್ಟಿಸಿ ಸಿಂಧುತ್ವ ಪ್ರಮಾಣ ಪತ್ರ ಸಿಗದ ಹಾಗೆ ಮಾಡಿದ್ದಾರೆ. ಸರ್ಕಾರ ಮತ್ತೆ ಹಿಂದಿನ ತಲೆಮಾರಿನ ದಾಖಲಾತಿ ಕೇಳುವುದು ಯಾವ ನ್ಯಾಯ? ಇದರ ಹಿಂದೆ ಕಾಣದ ಕೈಗಳ ಕುತಂತ್ರ ಅಡಗಿದೆ. ಉದ್ದೇಶಪೂರ್ವಕ ನಿಯಮಗಳಿಗೆ ತಳವಾರ ಸಮುದಾಯವು ಸಹಿಸುವುದಿಲ್ಲ.
ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯಸ್ಥಿಕೆ ವಹಿಸಿ 15 ದಿನಗಳ ಒಳಗಾಗಿ ಸಮಸ್ಯೆಯನ್ನು ಬಗೆಹರಿಸಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಬರುವಂತ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!