ಉದಯವಾಹಿನಿ, ಕೆಆರ್ ಪುರ: ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಹಾಗೂ ಬಂಡೆ ಹೊಸೂರಿನಲ್ಲಿ ಬಿಬಿಎಂಪಿಯ ಘನ ತ್ಯಾಜ್ಯ ವಿಲೇವಾರಿ ಘಟಕದಿಂದ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಕುರಿತು ಸ್ಥಳೀಯರಿಂದ ದೂರು ಬಂದ ಹಿನ್ನೆಲೆ, ಶಾಸಕಿ ಮಂಜುಳಾ ಲಿಂಬಾವಳಿ, ಮಹದೇವಪುರ ಟಾಸ್ಕ್ ಫೋರ್ಸ್ ಅಧ್ಯಕ್ಷರು ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ತ್ಯಾಜ್ಯ ಘಟಕಗಳ ಪರಿವೀಕ್ಷಣೆ ನಡೆಸಿದರು.
ಕ್ಷೇತ್ರದ ಕಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಿಟ್ಟಗಾನಹಳ್ಳಿ ಹಾಗೂ ಬಂಡೆ ಹೊಸೂರು ಗ್ರಾಮಗಳ ಕಲ್ಲುಕ್ವಾರಿಗಳಲ್ಲಿ ಕಳೆದ ಹಲವು ವರ್ಷಗಳಿಂದ ಬಿಬಿಎಂಪಿ ಘನ ತ್ಯಾಜ್ಯ ವಿಲೇವಾರಿ ಮಾಡುತ್ತಿದೆ, ದಿನ ಕಳೆದಂತೆ ಲಕ್ಷಾಂತರ ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹಗೊಂಡಿದೆ, ತ್ಯಾಜ್ಯ ಶೇಖರಣೆಯಿಂದ ಸುತ್ತಮುತ್ತಲಿನ ಗ್ರಾಮಗಳ ನೀರು, ವಾತಾವರಣ ಸಂಪೂರ್ಣ ಕಲುಷಿತಗೊಂಡಿದ್ದು , ಶುದ್ಧ ಗಾಳಿಯು ಲಭಿಸಿದಂತಾ ಸ್ಥಿತಿ ಸೃಷ್ಟಿಯಾಗಿದೆ. ಈ ನಡುವೆ ಸಮಸ್ಯೆಗಳು ಮತ್ತಷ್ಟು ಬಿಗಾಡಾಸಿದ ಹಿನ್ನಲೆ ಸ್ಥಳೀಯರು ಶಾಸಕರಿಗೆ ದೂರನ್ನು ನೀಡಿದ್ದು , ಶಾಸಕಿ ಮಂಜುಳಾ ಲಿಂಬಾವಳಿ ಅವರು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರ ಸಮ್ಮುಖದಲ್ಲಿ ತ್ಯಾಜ್ಯ ಘಟಕಗಳ ಪರಿವೀಕ್ಷಣೆ ನಡೆಸಿದರು.
