ಉದಯವಾಹಿನಿ,ಅಫಜಲಪುರ: ಕುಡಿತದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಹೀಗಾಗಿ ಸಮಾಜ ಮತ್ತು ಕುಟುಂಬಗಳ ನಿರ್ವಹಣೆ ಸರಿಯಾಗಿ ನಡೆದುಕೊಂಡು ಬರಲು ಮದ್ಯ ವ್ಯಸನಿಗಳನ್ನು ಕುಡಿತದಿಂದ ದೂರ ಮಾಡಲು ಧರ್ಮಸ್ಥಳ ಸಂಸ್ಥೆ ಸಂಕಲ್ಪ ಮಾಡಿದೆ ಎಂದು ಸಂಸ್ಥೆಯ ಜಿಲ್ಲಾ ಪ್ರಾದೇಶಿಕ ನಿರ್ದೇಶಕ ಸತೀಶ ಸುವರ್ಣ ತಿಳಿಸಿದರು.ಮದ್ಯಪಾನ ಮಾಡುವವರು ಮತ್ತು ಮದ್ಯ ವ್ಯಸನಿಗಳನ್ನು ಕುಡಿತದಿಂದ ಬಿಡಿಸಲು ಪಟ್ಟಣದ ಮಳೇಂದ್ರ ಸಂಸ್ಥಾನ ಹಿರೇಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಡಿಸೆಂಬರ್ ೨೩ ರಿಂದ ೩೦ ರವರೆಗೆ ೮ ದಿನಗಳ ಕಾಲ ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಕಲ್ಯಾಣ ಮಂಟಪದಲ್ಲಿ ಮದ್ಯವರ್ಜನ ಶಿಬಿರ ಏರ್ಪಡಿಸಲಾಗಿದೆ. ಈ ಶಿಬಿರವು ಈಗಾಗಲೇ ರಾಜ್ಯಾದ್ಯಂತ ನಡೆದುಕೊಂಡು ಬರುತ್ತಿದ್ದು ಲಕ್ಷಾಂತರ ಜನ ಕುಡಿತವನ್ನು ಬಿಟ್ಟು ಪರಿವರ್ತನೆಯಾಗಿದ್ದಾರೆ. ಈ ಶಿಬಿರಕ್ಕೆ ಸೇರ್ಪಡೆಗೊಳ್ಳುವ ಶಿಬಿರಾರ್ಥಿಗಳ ವಯಸ್ಸು ೨೦ ರಿಂದ ೪೫ ರ ಒಳಗೆ ಇರಬೇಕು. ಪ್ರಾಥಮಿಕ ಹಂತದಲ್ಲಿ ಸುಮಾರು ೧೦೦ ರಿಂದ ೧೫೦ ಜನ ಶಿಬಿರಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಈ ಸಾಮಾಜಿಕ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಜನಜಾಗೃತಿ ಯೋಜನಾಧಿಕಾರಿ ರಾಜೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಬೆಳೆದು ಬಂದ ದಾರಿ, ೧೯೮೨ ರಲ್ಲಿ ಮದ್ಯವರ್ಜನೆ ಶಿಬಿರ ಹುಟ್ಟಿಕೊಂಡ ಬಗೆ ಹಾಗೂ ಡಾ. ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಕೊಡುಗೆಗಳ ಕುರಿತು ವಿವರಿಸಿದರು.ಸಾನಿಧ್ಯ ವಹಿಸಿದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡುತ್ತಾ ಧರ್ಮವಿದ್ದಲ್ಲಿ ಧರ್ಮಸ್ಥಳ ಸಂಸ್ಥೆಯ ಕಾರ್ಯ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಅನೇಕ ಸಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಸಂಸ್ಥೆಯ ಹಿರಿಮೆ ಲೋಕಮನ್ನಣೆಗೆ ಪಾತ್ರವಾಗಿದೆ. ಇಂತಹ ಕಾರ್ಯಗಳಿಗೆ ನಮ್ಮ ಸಹಕಾರ ಎಂದಿಗೂ ಇರುತ್ತದೆ ಎಂದು ಆಶೀರ್ವಚನ ನೀಡಿದರು. ಸಭೆಯನ್ನು ತಾಲೂಕು ಯೋಜನಾಧಿಕಾರಿ ಶಿವರಾಜ ಆಚಾರ್ಯ ನಿರೂಪಿಸಿ ವಂದಿಸಿದರು.ಸಭೆಯಲ್ಲಿ ಶಿಬಿರಾರ್ಥಿಗಳ ಆಯ್ಕೆ ಮತ್ತು ಒಪ್ಪಿಗೆ ಪತ್ರ ಪಡೆಯುವ ಕುರಿತು, ೮ ದಿನಗಳ ಕಾರ್ಯಕ್ರಮದ ವಿವರ, ಸಂಪನ್ಮೂಲ ಕ್ರೋಢೀಕರಣ, ಜವಾಬ್ದಾರಿ ಹಂಚಿಕೆ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು. ಹಾಗೂ ಇದೇ ವೇಳೆ ಶಿಬಿರಕ್ಕೆ ತಗುಲುವ ಆರ್ಥಿಕ ನೆರವು ಹಾಗೂ ಆಹಾರ ಪದಾರ್ಥ ನೀಡಲು ಅನೇಕರು ತಮ್ಮ ಕೈಲಾದ ಸಹಕಾರ ನೀಡುವುದಾಗಿ ಹೆಸರು ನೋಂದಾಯಿಸಿದರು. ಸಭೆಯಲ್ಲಿ ಪಟ್ಟಣದ ಪ್ರಮುಖ ಗಣ್ಯರು ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.
ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು
ಗೌರವಾಧ್ಯಕ್ಷರಾಗಿ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಅಧ್ಯಕ್ಷರಾಗಿ ಸಂತೋಷ ದಾಮಾ, ಉಪಾಧ್ಯಕ್ಷರಾಗಿ ಭರತೇಶ ಮಾಲಗತ್ತಿ, ಚಂದ್ರಾಮಪ್ಪ ಬಳೂಂಡಗಿ, ಬಸಯ್ಯ ನಂದಿಕೋಲ, ರಾಚಯ್ಯ ಮಠ, ಕಾರ್ಯದರ್ಶಿಗಳಾಗಿ ಧರ್ಮಸ್ಥಳ ಸಂಸ್ಥೆಯ ವಲಯ ಮೇಲ್ವಿಚಾರಕಿ ರೂಪಾ, ಸಹ ಕಾರ್ಯದರ್ಶಿಯಾಗಿ ಪತ್ರಕರ್ತ ಅರುಣಕುಮಾರ ಹೂಗಾರ, ಗೌರವ ಸಲಹೆಗಾರರಾಗಿ ಚಂದು ಕರಜಗಿ, ಶೈಲೇಶ ಗುಣಾರಿ, ಡಾ. ಶ್ರೀಶೈಲ ಪಾಟೀಲ, ಪ್ರಭಾವತಿ ಮೇತ್ರಿ, ಬಸಯ್ಯ ನಂದಕೋಲ, ಚಂದು ಬನ್ನೆಟ್ಟಿ, ರಾಜೇಶ, ಸಂತೋಷ, ನಿರ್ಮಲಾ, ಜಗದೇವಿ ಅವರನ್ನು ಸರ್ವಾನುಮತದಿಂದ ನೇಮಕ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!