
ಉದಯವಾಹಿನಿ ಪಾವಗಡ: ಗ್ರಾಹಕರ ಮನೆಗಳಿಗೆ ತಲುಪಬೇಕಿದ್ದ ಗೃಹ ಬಳಕೆ ಅನಿಲ ಸಿಲಿಂಡರ್‌ಗಳನ್ನು ಏಜೆನ್ಸಿ ಸಿಬ್ಬಂದಿಯೇ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಪರಿಣಾಮ ಗ್ರಾಹಕರಿಗೆ ಸಿಲಿಂಡರ್ ಅಭಾವ ಸೃಷ್ಟಿಯಾಗಿದೆ ಎಂದು ಆರೋಪಿಸಿ ಗ್ರಾಹಕರು ಶುಕ್ರವಾರ ತಾಲ್ಲೂಕಿನ ವೈ.ಎನ್.ಹೊಸಕೋಟೆಯ ಎಸ್.ಎಂ.ಇಂಡೇನ್ ಗ್ಯಾಸ್ ಏಜೆನ್ಸಿ ಮುಂಭಾಗ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.
ಈ ವೇಳೆ ಗ್ರಾಹಕ ಚಿಕ್ಕ ಜಾಲೋಡು ಎಂ.ಕರಿಯಣ್ಣ ಮಾತನಾಡಿ, ಗ್ಯಾಸ್ ಸಿಲಿಂಡರ್‌ಗಳನ್ನು ಅಕ್ರಮವಾಗಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿರುವುದರಿಂದ ಸಿಲಿಂಡರ್ ಅಭಾವ ಸೃಷ್ಟಿಯಾಗುತ್ತಿದೆ. ಗ್ರಾಹಕರು ಕಾಯ್ದಿರಿಸುವ ಸಿಲಿಂಡರ್‌ಗಳನ್ನು ಏಜೆನ್ಸಿ ಸಿಬ್ಬಂದಿಯೇ ಅಕ್ರಮವಾಗಿ ಮಾರುತ್ತಿದ್ದಾರೆ. ನಿಗದಿತ ಸಮಯಕ್ಕೆ ಗ್ರಾಹಕರಿಗೆ ಅಡುಗೆ ಅನಿಲ ಸಿಲಿಂಡರ್ ಸಿಗುತ್ತಿಲ್ಲ.
ಕಳೆದ 4-5 ದಿನಗಳಿಂದ ಸತತವಾಗಿ ಕಚೇರಿಗೆ ಗ್ಯಾಸ್ ಸಿಲಿಂಡರ್ ಗಾಗಿ ಅಲೆದಾಡುತ್ತಿದ್ದು, ಸಿಲಿಂಡರ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ ಎಂದು ಸಬೂಬು ಹೇಳುತ್ತಾ ರಾತ್ರೋರಾತ್ರಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಪ್ರತಿದಿನ ನಾಳೆ ಬನ್ನಿ ಎಂದು ಗ್ರಾಹಕರನ್ನು ಅಲೆದಾಡಿಸುತ್ತಿದ್ದಾರೆ. ಪ್ರತಿದಿನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು 150 ರಿಂದ 200 ರೂಪಾಯಿ ಖರ್ಚು ಮಾಡಿಕೊಂಡು ಕಛೇರಿಯ ಬಳಿ ಗ್ರಾಹಕರು ಗ್ಯಾಸ್ ಸಿಲಿಂಡರ್ ಗಾಗಿ ಪರದಾಡುವಂತಾಗಿದೆ ಎಂದರು.ಚಿಕ್ಕಹಳ್ಳಿ ಪ್ರಮೋದ್ ಮಾತನಾಡಿ, ಬೇರೆ ಕಡೆ ಎಲ್ಲಾ ಸಕ್ರಮವಾಗಿ ನಿಗದಿತ ಸಮಯಕ್ಕೆ ಗ್ರಾಹಕರಿಗೆ ಸಿಲಿಂಡರ್ ಪೂರೈಕೆ ಮಾಡುತ್ತಿದ್ದಾರೆ. ಕೇವಲ ಇಲ್ಲಿ ಮಾತ್ರ ಸಿಬ್ಬಂದಿ ನಿರ್ಲಕ್ಷದಿಂದ ಗ್ರಾಹಕರು ಸಿಲಿಂಡರ್ ಗಾಗಿ ಪರದಾಡುವಂತಾಗಿದೆ. ಪ್ರತಿಯೊಬ್ಬ ಗ್ರಾಹಕನ ಬಳಿ ಡಿಎಸಿ ಸಂಖ್ಯೆ ಪಡೆದು ಸಿಲಿಂಡರ್ ವಿತರಣೆ ಮಾಡಬೇಕು. ಆದರೆ ಏಜೆನ್ಸಿ ಸಿಬ್ಬಂದಿ ಕಂಪನಿಯ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಮಾರಾಟಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ವೈ.ಎನ್.ಹಳ್ಳಿ ಈರಣ್ಣ, ಕತಿಕ್ಯಾತನಹಳ್ಳಿ ನಾರಾಯಣ, ಓಬಳಪತಿ, ರವಿಚಂದ್ರ, ಶ್ರೀನಿವಾಸ, ಹೊನ್ನೂರಪ್ಪ, ಸಾವಿತ್ರಮ್ಮ, ಲಕ್ಷ್ಮೀದೇವಿ ಮತ್ತಿತರರು ಇದ್ದರು.
