ಉದಯವಾಹಿನಿ, ಕೋಲಾರ: ಮಂಗಳಮುಖಿಯು ಸಹ ಸಮಾಜಮುಖಿಯಾಗಲು ಸಾಧ್ಯ ಎಂಬುದನ್ನು ಸಮಾಜ ಅರಿಯಬೇಕು ನಾವು ಸಹ ಎಲ್ಲರಂತೆ ಬದುಕಲು ಅವಕಾಶ ಮಾಡಿಕೊಡಬೇಕೆಂದು ಖ್ಯಾತ ತೃತೀಯ ಲಿಂಗಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಅಕ್ಕಾಯಿ ಪದ್ಮಶಾಲಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ “ಲಿಂಗ ಸಮಾನತೆ, ಮಾನವ ಹಕ್ಕುಗಳು” ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಇಡೀ ಪ್ರಪಂಚಾದ್ಯಂತ ತೃತೀಯ ಲಿಂಗಿಗಳ ಬದುಕು ಸಮಾಜ ಅವರನ್ನು ನೋಡುವ ದೃಷ್ಟಿ ತುಂಬಾ ಕೆಟ್ಟದಾಗಿದೆ ನಾವೂ ಸಹ ಮನುಷ್ಯರೇ ಎಂದು ಅರ್ಥಮಾಡಿಸಲು ಕಷ್ಟವಾಗಿದೆ, ಇತ್ತೀಚೆಗೆ ಸುಪ್ರಿಂ ಕೋರ್ಟ್ ತೃತೀಯ ಲಿಂಗಿಗಳ ಮದುವೆ ಅಸಿಂಧು ಎಂದು ತಿರ್ಪು ನೀಡಿದೆ. ಹೆಣ್ಣು ಗಂಡು ಅಷ್ಟೇ ಈ ಸಮಾಜದಲ್ಲಿ ಶ್ರೇಷ್ಠ ಎನ್ನುವ ಭಾವನೆ ಬಂದಿರುವುದರಿಂದ ನಮ್ಮಗಳ ಬಗ್ಗೆ ಈ ತೀರ್ಪು ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಯಾವುದೇ ವಿಶ್ವವಿದ್ಯಾಲಯಗಳು, ಕಾಲೇಜು ಶಿಕ್ಷಣ ಸಂಸ್ಥೆಗಳು, ಶಾಲೆಗಳ ಮಟ್ಟದಲ್ಲಿ ತೃತೀಯ ಲಿಂಗಿಗಳು ಎಂಬ ಕಾರಣಕ್ಕಾಗಿ ನಮ್ಮನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡಿದೆ ಮಂಗಳಮುಖಿಯು ಸಹ ಸಮಾಜಮುಖಿಯಾಗಲು ಸಾಧ್ಯ ಎಂಬುದನ್ನು ಸಮಾಜ ಅರಿಯಬೇಕಾಗಿದೆ.
