ಉದಯವಾಹಿನಿ, ಬೆಂಗಳೂರು, ನಗರದ ಗವಿಪುರಂ ಗುಟ್ಟಹಳ್ಳಿ ಹೆರಿಗೆ ಆಸ್ಪತ್ರೆಯಲ್ಲಿ ಡಿ.೧ರಿಂದ ದಿನದ ೨೪ ಗಂಟೆಯೂ ಸಹಜ ಹೆರಿಗೆ ಹಾಗೂ ಸಿಸೆರಿಯನ್ ಶಸ್ತ್ರಚಿಕಿತ್ಸೆ ಸೇವೆ ಉಚಿತವಾಗಿ ನೀಡಲಾಗುವುದು ಎಂದು ಬಿಬಿಎಂಪಿ ಪ್ರಕಟಿಸಿದೆ.
ನಗರದಲ್ಲಿಂದು ಬಿಬಿಎಂಪಿಯ ಗವಿಪುರಂ ಗುಟ್ಟಹಳ್ಳಿ ಹೆರಿಗೆ ಆಸ್ಪತ್ರೆಯ ಪುನರಾರಂಭಕ್ಕೆ ಶಾಸಕ ಉದಯ್ ಬಿ. ಗರುಡಾಚಾರ್ ಹಾಗೂ ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯರಾಮ್ ರಾಯಪುರ ಚಾಲನೆ ನೀಡಿದರು. ಹ್ಯೂಮನ್ ಹೆಲ್ತ್ ಕೇರ್ ವತಿಯಿಂದ ಡಿಸೆಂಬರ್ ೧ರಿಂದ ಹೆರಿಗೆ ಆಸ್ಪತ್ರೆಯಲ್ಲಿ ದಿನದ ೨೪ ಗಂಟೆಯೂ ಸಹಜ ಹೆರಿಗೆ ಹಾಗೂ ಸಿಸೆರಿಯನ್ ಶಸ್ತ್ರಚಿಕಿತ್ಸೆ ಸೇವೆಗಳನ್ನು ಹೆಸರಾಂತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ವೈದ್ಯರಿಂದ ಉಚಿತ ಸೇವೆಗಳನ್ನು ನೀಡಲು ಪಿಪಿಪಿ ಅಡಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ.
ಇನ್ನೂ, ಪುನಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಉದಯ್ ಬಿ. ಗರುಡಾಚಾರ್, ಪಾಲಿಕೆಯ ಗವಿಪುರಂ ಗುಟ್ಟಹಳ್ಳಿ ಹೆರಿಗೆ ಆಸ್ಪತ್ರೆಯು ೧೯೬೩ರಲ್ಲಿ ಸ್ಥಾಪನೆಯಾಗಿದ್ದು, ೨೦೨೦ ರವರೆಗೂ ಸಹಜ ಹೆರಿಗೆ ಆರೋಗ್ಯ ಸೇವೆಗಳನ್ನು ನೀಡಲಾಗುತ್ತಿತ್ತು. ಕೋವಿಡ್ ಬಂದ ನಂತರ ಸದರಿ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ೧೦ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿತ್ತು.
