ಉದಯವಾಹಿನಿ, ಬಳ್ಳಾರಿ: ಭಾರತ ದೇಶದ ಉಕ್ಕಿನ ಮಹಿಳೆ, ಲೆನಿನ್ ಪ್ರಶಸ್ತಿ ಪುರಸ್ಕೃತೆ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದಿರಾ ಗಾಂಧಿಯವರ 106ನೇ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ದಿನ ಉದ್ಘಾಟಿಸಿ, ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ ತಮ್ಮ ಹದಿನಾರು ವರ್ಷಗಳ ಪ್ರಧಾನಮಂತ್ರಿ ಆಳ್ವಿಕೆಯ ಅವಧಿಯಲ್ಲಿ ಬಡತನ ನಿರ್ಮೂಲನೆ ಮಾಡಲು ಇಪ್ಪತ್ತು ಅಂಶಗಳ ಕಾರ್ಯಕ್ರಮ ಜಾರಿಗೆ ತಂದಿದ್ದರು.
ಅದು ಇತಿಹಾಸ ಪುಟಗಳಲ್ಲಿ ಗರೀಬಿ ಹಠಾಹೋ ಎಂದೇ ಪ್ರಸಿದ್ಧಿ ಪಡೆದಿದೆ.
ದೇಶದ ಹಳ್ಳಿಯ ಜನ ದೂರದರ್ಶನ ನೋಡಲಿ ಎಂದು ಆ ಕ್ಷೇತ್ರದಲ್ಲಿ ಕ್ರಾಂತಿಯೇ ಮಾಡಿದರು. ಅಲ್ಪಾವಧಿ ಬೆಳೆಗಳಿಗೆ ಹೊತ್ತು ಕೊಟ್ಟು ದೇಶದಲ್ಲಿ ಆಹಾರ ದಾಸ್ತಾನು ಹೆಚ್ಚಿಸಿದರು.
ಆದ್ದರಿಂದ ನಾವು ನೀವು ಇಂದಿರಾ ಗಾಂಧಿಯವರಂತೆ ಧೈರ್ಯ, ಸಾಹಸ,ದೇಶಾಭಿಮಾನ ಗುಣಗಳನ್ನು ಮೈಗೂಡಿಸಿಕೊಂಡು ಬಾಳೋಣ ಎಂದರು.
