ಉದಯವಾಹಿನಿ, ಕೋಲಾರ: ಕಳೆದ ನ. ೮ ರಿಂದ ೧೨ ರವರೆಗೆ ಫಿಲಿಪೈನ್ಸ್‌ನ ನ್ಯೂ ಕ್ಲಾರ್ಕ್ ಸಿಟಿಯಲ್ಲಿ ನಡೆದ ೨೨ನೇ ಏಷ್ಯನ್ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಜಿಲ್ಲೆಯ ಹಿರಿಯ ಕ್ರೀಡಾಪಟು ಮೂರಾಂಡಹಳ್ಳಿಯ ಸಿ.ಲಕ್ಷ್ಮಮ್ಮ ಬೆಳ್ಳಿ ಪದಕ ಹಾಗೂ ಮುಳಬಾಗಿಲಿನ ವೆಂಕಟೇಶ್ ಬೆಳ್ಳಿ ಪದಕ ಹಾಗೂ ಕಂಚಿನ ಪದಕ ಪಡೆದು ಸಾಧನೆ ಮಾಡಿದ್ದಾರೆ.
ಫಿಲಿಫೈನ್ಸ್‌ನಲ್ಲಿ ನಡೆದ ಅಥ್ಲೆಟಿಕ್ಸ್ ಚಾಂಪಿಯನ್‌ಶಿಫ್ ಕ್ರೀಡಾ ಕೂಟದಲ್ಲಿ ಸಿ.ಲಕ್ಷ್ಮಮ್ಮ ೧೫೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದುಕೊಂಡರೆ, ಎಂ.ವೆಂಕಟೇಶ್ ೧೦ ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಹಾಗೂ ೩ ಸಾವಿರ ಮೀಟರ್ ಸ್ಟೀಪಲ್ ಚೇಸ್ ಓಟದಲ್ಲಿ ಕಂಚಿನ ಪದಕ ಪಡೆದು ಜಿಲ್ಲೆಗೆ, ರಾಜ್ಯಕ್ಕೆ, ಭಾರತ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಸಿ.ಲಕ್ಷ್ಮಮ್ಮ ತಾಲೂಕಿನ ಮೂರಾಂಡಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ತಮ್ಮ ಜೀವನೋಪಾಯಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂ.ವೆಂಕಟೇಶ್ ಮುಳಬಾಗಿಲು ತಾಲೂಕು ವೀಸಂದ್ರ ಅಗ್ರಹಾರ ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಕೋಲಾರ ಜಿಲ್ಲಾ ಕ್ರೀಡಾ ವಸತಿ ಶಾಲೆಯಲ್ಲಿ ಕ್ರೀಡಾ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ.
ಜಿಲ್ಲೆಗೆ ಕೀರ್ತಿ ತಂದಿರುವ ಈ ಇಬ್ಬರು ಕ್ರೀಡಾಪಟುಗಳನ್ನು ಕೋಲಾರ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್.ಮುನಿಯಪ್ಪ, ಪ್ರದಾನ ಕಾರ್ಯದರ್ಶಿ ಕೆ.ಆರ್.ರಾಘವೇಂದ್ರ, ಹಿರಿಯ ಕ್ರೀಡಾಪಟು ಹೆಚ್. ಜಗನ್ನಾಥನ್, ಉಪಾಧ್ಯಕ್ಷ ಗೌಸ್‌ಖಾನ್, ಕಾರ್ಯದರ್ಶಿ ಕೆ.ರಾಜೇಶ್ ಬಾಬು ಮತ್ತಿತರರು ಅಭಿನಂದಿಸಿದ್ದಾರೆ.
