ಉದಯವಾಹಿನಿ, ಕೋವಿಡ್ ಸಮಯದಲ್ಲಿ ಖಾಲಿ ಇದ್ದ ಬೆಂಗಳೂರಿನ ಮನೆಗಳೆಲ್ಲಾ ಇಂದು ತುಂಬಿಹೋಗಿವೆ. ಬಾಡಿಗೆದಾರರಿಲ್ಲದೇ ಖಾಲಿ ಉಳಿದಿದ್ದ ಮನೆಗಳಿಗೆ ಬೇಡಿಕೆ ಬರ್ತಿದ್ದು ಇದು ಬಾಡಿಗೆದಾರರ ಜೇಬಿಗೆ ಕತ್ತರಿ ಹಾಕಿದೆ. 2023 ರಲ್ಲಿ ಬೆಂಗಳೂರಲ್ಲಿ ಬಾಡಿಗೆ ಮನೆಗಳ ಬೆಲೆಯಲ್ಲಿ ಏರಿಕೆಯಾಗಿರುವುದನ್ನ 2 ಸ್ವತಂತ್ರ ಸಮೀಕ್ಷೆಗಳು ಕಂಡುಕೊಂಡಿವೆ.
ನೋ ಬ್ರೋಕರ್ಸ್ ರಿಯಲ್ ಎಸ್ಟೇಟ್ ರಿಪೋರ್ಟ್ 2023 ಮತ್ತು ಕನ್ಸಲ್ಟೆನ್ಸಿ ವೇದಿಕೆ ಅನಾರಾಕ್ ಪ್ರಕಾರ, ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಮನೆ ಬಾಡಿಗೆ ಶೇಕಡಾ 30 ರಷ್ಟು ಹೆಚ್ಚಾಗಿದೆ.
ಬೆಂಗಳೂರು ಮತ್ತು ಮುಂಬೈನಲ್ಲಿನ ಏಳು ಪ್ರತಿಶತ ಭೂಮಾಲೀಕರು 2023 ರಲ್ಲಿ ಬಾಡಿಗೆಯನ್ನು ಶೇಕಡಾ 30 ರಷ್ಟು ಹೆಚ್ಚಿಸಿದ್ದಾರೆ ಎಂದು ನೋ ಬ್ರೋಕರ್ ಹೇಳಿದೆ. ಬೆಂಗಳೂರಿನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 52 ರಷ್ಟು ಭೂಮಾಲೀಕರು ಬಾಡಿಗೆಯಿಂದ ಬರುವ ಆದಾಯವನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದಾರೆ.
ಮತ್ತೊಂದೆಡೆ ಅನರಾಕ್ ವರದಿಯ ಪ್ರಕಾರ ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯಲ್ಲಿ 2023 ರ ಮೊದಲ ಒಂಬತ್ತು ತಿಂಗಳಲ್ಲಿ ಗರಿಷ್ಠ ಬಾಡಿಗೆ ಹೆಚ್ಚಳವಾಗಿದೆ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಟಿಸಿದ ಸಲಹೆಗಾರರ ಸಂಶೋಧನೆಗಳ ಪ್ರಕಾರ ಸುಮಾರು 1,000 ಚದರ ಅಡಿಗಳ ಪ್ರಮಾಣಿತ 2BHK ಫ್ಲಾಟ್ ಹೊಂದಿರುವ ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದಲ್ಲಿ ಶೇ 31 ರಷ್ಟು ಬಾಡಿಗೆ ಹೆಚ್ಚಳವಾಗಿದೆ. ಸರ್ಜಾಪುರದಲ್ಲಿ ಅಂತಹ ಮನೆಗಳ ಬಾಡಿಗೆ ಶೇಕಡಾ 27 ರಷ್ಟು ಹೆಚ್ಚಾಗಿದೆ.
