ಉದಯವಾಹಿನಿ, ಕಲಬುರಗಿ: ಇಡೀ ಜಗತ್ತಿನ ಗಮನ ಸೆಳೆದಿರುವ ಸಂಸತ್ ಮೇಲಿನ ದಾಳಿ ಪ್ರಕರಣದ ಕುರಿತು ಇಂದಿಗೂ ಸದನದಲ್ಲಿ ಒಂದು ಹೇಳಿಕೆ ನೀಡಲಾಗದ ಅಮಿತ್ ಶಾ ಈ ದೇಶ ಕಂಡ ಅಸಮರ್ಥ ಹೋಂ ಮಿನಿಸ್ಟರ್ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಐಟಿ-ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.ನಗರದಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಸಂಸತ್ ಮೇಲಿನ ದಾಳಿ ಯತ್ನ ಒಂದು ಗಂಭೀರ ವಿಷಯ ಎಂದು ವ್ಯಾಖ್ಯಾನಿಸಿದ್ದಾರೆ. ಇಷ್ಟಾದರೂ ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಈ ಕುರಿತು ಅಧಿಕೃತವಾದ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಸಂಸತ್ ಸದಸ್ಯರ ಅಮಾನತು ಕುರಿತಂತೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಎಂದೂ ಚುನಾಯಿತ ಸದಸ್ಯರ ಅಮಾನತು ಆಗಿರಲಿಲ್ಲ. ಇದರ ಜೊತೆಗೆ, ಇಂತಹ ಅಸಮರ್ಥ ಹೋಂ ಮಿನಿಸ್ಟರ್ ಸಹ ಈ ದೇಶ ನೋಡಿಲ್ಲ.ಮೈಸೂರು ಸಂಸದರ ಕಾರ್ಯವೈಖರಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಅಸಮರ್ಥತೆ ಮುಚ್ಚಿ ಹಾಕಲು ಪ್ರತಿಪಕ್ಷಗಳ ಸಂಸದರನ್ನು ಅಮಾನತುಗೊಳಿಸುವ ಮೂಲಕ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಯತ್ನಿಸಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಗಂಭೀರ ಆರೋಪ ಮಾಡಿದರು. ಜವಾಬ್ದಾರಿಯುತ ಸ್ಥಾನದಲ್ಲಿರುವ ಗೃಹ ಸಚಿವರು ಪಾರ್ಲಿಮೆಂಟ್‌ನಲ್ಲಿ ಹೇಳಿಕೆ ನೀಡಬೇಕೆ ಹೊರತು; ಪ್ರತಿಪಕ್ಷಗಳ ಸದಸ್ಯರನ್ನು ಅಮಾನತುಗೊಳಿಸಲು ಮುಂದಾಗಬಾರದು. ಇದೇನಿದ್ದರೂ ಇವರ ಅಸಮರ್ಥ ಕಾರ್ಯಶೈಲಿ ಎತ್ತಿ ತೋರಿಸುವಂತಿದೆ ಎಂದು ವ್ಯಾಖ್ಯಾನಿಸಿದರು.
