ಉದಯವಾಹಿನಿ, ಕಲಬುರಗಿ: ನಾನು ಯಾವತ್ತೂ ಹೀರೋ ಆಗಬೇಕು ಎಂದವನಲ್ಲ; ನಾನೇನಿದ್ದರೂ ವಿಲನ್ ಎಂದು ಬಿಜೆಪಿಯ ಫೈರ್ ಬ್ರ್ಯಾಂಡ್ ಬಸನಗೌಡ ಪಾಟೀಲ್ ಯತ್ನಾಳ ನುಡಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಲನ್ ಇದ್ದರೆ ಮಾತ್ರ ಹೀರೊಗೆ ಕಿಮ್ಮತ್ತು ಇರುತ್ತದೆ. ವಿಲನ್ ಇಲ್ಲದಿದ್ದರೆ ಹೀರೊ ಯಾರ ಜೊತೆ ಫೈಟ್ ಮಾಡುತ್ತಾನೆ ಎಂದು ಪ್ರಶ್ನಿಸಿದ ಅವರು, ಸರ್ವ ಪಕ್ಷಗಳಿಗೂ ನಾನೇ ವಿರೋಧ ಪಕ್ಷದ ನಾಯಕ ಎಂದು ಮುಗುಳ್ನಕ್ಕರು.
ಈ ಹಿಂದೆ ನಟ ಅಂಬರೀಷ್ ಸಹ ವಿಲನ್ ಆಗಿದ್ದರು. ನಂತರವಷ್ಟೇ ಅವರು ಹೀರೋ ಆದರು. ಅದೇ ತರಹ ನಾನು ಆಮೇಲೆ ಹೀರೋ ಆಗಬಹುದು ಎಂದು ತಮ್ಮ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂಡಿಯಾ ಮೈತ್ರಿಕೂಟದಿಂದ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವ ಕುರಿತು ಪ್ರಸ್ತಾಪಿಸಿದ ಅವರು, ಖರ್ಗೆಯವರು ಪ್ರಧಾನಿ ಆಗುವ ಕಾಲ ಇದಲ್ಲ. ಮೊದಲೇ ಏನಾದರೂ ಪ್ರಯತ್ನಿಸಿದ್ದರೆ ಪ್ರಧಾನಿ ಆಗಬಹುದಿತ್ತು. ಇನ್ನು ಮುಂದೆ ಏನಿದ್ದರೂ ಮೋದಿಯವರೇ ಮತ್ತೆ ಪ್ರಧಾನಿ ಆಗುತ್ತಾರೆ. ಖರ್ಗೆಯವರು ಏನಿದ್ದರೂ ಮತ್ತದೇ ವಿರೋಧ ಪಕ್ಷದ ನಾಯಕರಾಗಿ ಉಳಿಯಬೇಕಾಗುತ್ತದೆ ಎಂದರು.
