ಉದಯವಾಹಿನಿ, ವಿಜಯಪುರ: ಸುಗ್ಗಿಹಬ್ಬ ಮಕರ ಸಂಕ್ರಾಂತಿಗೆ ಅಗತ್ಯವಾಗಿ ಬೇಕಾಗಿರುವ ಕಬ್ಬು, ಗೆಣಸು, ಅವರೆಕಾಯಿ, ಕಡಲೇಕಾಯಿ, ಹೂವು, ಬಾಳೆಹಣ್ಣು ಮಾರಾಟಕ್ಕೆ ವ್ಯಾಪಾರಿಗಳು ಅಣಿಯಾಗಿದ್ದು, ಆದರೆ ನಿರೀಕ್ಷೆಯಂತೆ ಗ್ರಾಹಕರು ಬಾರದಿರುವುದು ನಿರಾಶೆ ಮೂಡಿಸಿದೆ.
ತೀವ್ರ ಮಳೆಯ ಕೊರತೆಯ ಕಾರಣದಿಂದ ಸ್ಥಳೀಯವಾಗಿ ರೈತರ ಹೊಲಗಳಲ್ಲಿ ಅವರೆಕಾಯಿ ಬೆಳೆಯದ ಕಾರಣ, ವ್ಯಾಪಾರಿಗಳು, ಚಿಂತಾಮಣಿ, ಹಾಗೂ ಚಿಕ್ಕಬಳ್ಳಾಪುರದ ಮಾರುಕಟ್ಟೆಗಳಲ್ಲಿ ಖರೀದಿ ಮಾಡಿಕೊಂಡು ಬಂದು ಮಾರಾಟ ಮಾಡುತ್ತಿದ್ದಾರೆ.
ಕಬ್ಬು ಒಂದು ಜಲ್ಲೆ ₹50, ಗೆಣಸು ಕೆ.ಜಿ. ₹50, ಕಡಲೇಕಾಯಿ ₹100, ಸಾಮ್ರಾಟ್ ಕಡಲೇಕಾಯಿ ₹120, ಅವರೆಕಾಯಿ ಒಂದೂವರೆ ಕೆ.ಜಿ. ₹100 ಗೆ ಮಾರಾಟವಾಗುತ್ತಿದ್ದು, ಭಾನುವಾರದಂದು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.
ಗುಲಾಬಿ ಹೂ ಕೆ. ಜಿ ಬೆಲೆ ₹160 ಇದ್ದದು ಈಗ ₹200, ಕನಕಾಂಬರ ₹1,200 ರೂಪಾಯಿ ಇದ್ದದ್ದು 1,500, ಕಾಕಡಾ ₹400 ರಿಂದ ₹600, ಚೆಂಡು ಹೂ ₹30 ರಿಂದ ₹60 ಸೇವಂತಿಗೆ 120 ರಿಂದ 160 ಆಗಿದೆ.
ಬಹುತೇಕ ವ್ಯಾಪಾರಿಗಳು, ಸರಕುಸಾಗಾಣಿಕೆಯ ವಾಹನಗಳನ್ನು ಸಿದ್ಧಪಡಿಸಿಕೊಂಡು, ಹಳ್ಳಿ, ಹಳ್ಳಿಗೂ ಹೋಗಿ, ಗೆಣಸು, ಕಡಲೇಕಾಯಿ, ಅವರೆಕಾಯಿ, ಕಬ್ಬು, ಹೂವು, ಹಣ್ಣುಗಳನ್ನು ಮಾರಾಟ ಮಾಡುತ್ತಿರುವ ಕಾರಣ, ಹಳ್ಳಿಗಳಿಂದ ಪಟ್ಟಣಕ್ಕೆ ಬಂದು ಖರೀದಿ ಮಾಡುತ್ತಿದ್ದ ಬಹುತೇಕ ಗ್ರಾಹಕರು ಪಟ್ಟಣಕ್ಕೆ ಬಾರದೇ ಹಳ್ಳಿಗಳಲ್ಲೆ ಖರೀದಿ ಮಾಡಿಕೊಳ್ಳುತ್ತಿದ್ದಾರೆ.
ಇದರಿಂದ ಪಟ್ಟಣದಲ್ಲಿ ವ್ಯಾಪಾರಕ್ಕಾಗಿ ಬಂಡವಾಳ ಹೂಡಿಕೆ ಮಾಡಿರುವ ವ್ಯಾಪಾರಿಗಳು, ಗ್ರಾಹಕರ ಕೊರತೆಯನ್ನು ಎದುರಿಸುತ್ತಿದ್ದು, ಹಾಕಿರುವ ಬಂಡವಾಳ ವಾಪಸ್ಸು ಬರುತ್ತೋ ಇಲ್ಲವೋ ಅನ್ನುವ ಭೀತಿಯಲ್ಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!