ಉದಯವಾಹಿನಿ, ಕೆಂಗೇರಿ: ನಗರ ಹಾಗೂ ಗ್ರಾಮೀಣ ಪ್ರದೇಶದ ನಾಗರೀಕರಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಲು ಸೂಚನೆ ನೀಡಲಾಗಿದೆ ಎಂದು ಶಾಸಕ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಬೆಸ್ಕಾಂ ಕೆಂಗೇರಿ ಕಚೇರಿಯಲ್ಲಿ ಆಯೋಜಿಸಿದ್ದ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಗ್ರಾಹಕ ಸ್ನೇಹಿ ಗೃಹ ಜ್ಯೋತಿ ಯೋಜನೆ ಅರ್ಹ ಗ್ರಾಹಕರಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಸಲಹೆ ನೀಡಿದರು.
ಕ್ಷೇತ್ರದ ಜನತೆಯ ನಾಗರೀಕರ ಹಿತವೊಂದೇ ನಮ್ಮ ಗುರಿಯಾಗಿದ್ದು ಅವರಿಗೆ ಸರ್ಕಾರದಿಂದ ದೊರಕುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಕೆಂಗೇರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕುಮಾರ್ ನಾಯಕ್ ಮಾತನಾಡಿ ನಾಗರೀಕರು ಹಾಗೂ ಸಿಬ್ಬಂದಿಗಳ ಜೀವ ಅಮೂಲ್ಯವಾದದ್ದು ಅವರ ಸುರಕ್ಷತೆಯೇ ಮೊದಲೇ ಆದ್ಯತೆಯಾಗಿದ್ದು, ವಿದ್ಯುತ್ ಅವಘಡಗಳನ್ನು ತಪ್ಪಿಸಲು ಜಾಗೃತಿ ಮೂಡಿಸಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಮಾಹಿತಿ ನೀಡಲಾಗುತ್ತಿದೆ. ನಾಗರೀಕರಿಗೆ ಪದೇ ಪದೇ ವಿದ್ಯುತ್ ಅಡಚಣೆ ಯಾಗುವುದನ್ನ ತಪ್ಪಿಸಿ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಶಾಸಕರಾದ ಎಸ್ .ಟಿ. ಸೋಮಶೇಖರ್ ಸೂಚನೆ ಮೇರೆಗೆ ಕ್ಷೇತ್ರ ವ್ಯಾಪ್ತಿಯ ನೂರಕ್ಕೆ ನೂರರಷ್ಟು ಅರ್ಹ ಗ್ರಾಹಕರಿಗೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅಗತ್ಯ ಸಹಕಾರ, ಮಾಹಿತಿ ನೀಡಲಾಗುತ್ತಿದೆ ಎಂದರು.ಪಾದ ಚಾರಿ ಮಾರ್ಗದಲ್ಲಿರುವ ವಿದ್ಯುತ್ ಪರಿವರ್ತಕಗಳಿಂದ ಎದುರಾಗುತ್ತಿರುವ ಅವಘಡಗಳನ್ನ ತಪ್ಪಿಸಿ ಅವುಗಳನ್ನು ಸ್ಥಳಾಂತರಗೊಳಿಸುವ ಮೂಲಕ ನಾಗರೀಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.
