ಉದಯವಾಹಿನಿ, ಕೋಲಾರ: ಪಂಚೇಂದ್ರಿಯ ಗಳಲ್ಲಿ ಮುಖ್ಯವಾಗಿರುವ ಕಣ್ಣಿನ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿರುವ ಹಿನ್ನೆಲೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸೂರ್ಯ ಚರ್ಮ ಮತ್ತು ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ಕೆ.ಎನ್.ಉದಯಕುಮಾರ್ ಹೇಳಿದರು.
ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್‌ನಿಂದ ನಗರದ ಸೂರ್ಯ ಚರ್ಮ ಮತ್ತು ಕಣ್ಣಿನ ಆಸ್ಪತ್ರೆಯಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಹಾಲು ಡೇರಿ ಮತ್ತು ಸಹಕಾರ ಸಂಘಗಳ ಮೂಲಕ ಹಳ್ಳಿ ಮಟ್ಟಕ್ಕೆ ನೇತ್ರ ತಪಾಸಣಾ ಶಿಬಿರವನ್ನು ಕೊಂಡೊಯ್ಯುವ ಮೂಲಕ ಮನೆ ಬಾಗಿಲಲ್ಲೇ ಸಾವಿರಾರು ಮಂದಿಗೆ ಕಣ್ಣಿನ ಚಿಕಿತ್ಸೆ ಮಾಡಲಾಗಿದ್ದು ನೂರಾರು ಮಂದಿಗೆ ಆಪರೇಷನ್ ಮಾಡಲಾಗಿದೆ ಎಂದರು.
ಆಧುನಿಕ ಯುಗದಲ್ಲೂ ಜನತೆ ಕಣ್ಣಿನ ಕುರಿತು ಎಚ್ಚರಿಕೆ ವಹಿಸುವುದಿಲ್ಲ, ಸಮಸ್ಯೆ ಕಂಡು ಬಂದ ತಕ್ಷಣ ಆಸ್ಪತ್ರೆಗೆ ಬಾರದೆ ಸ್ವಯಂ ವೈದ್ಯ ಹಾಗೂ ಮೆಡಿಕಲ್ ಸ್ಟೋರ್ ಮಾತ್ರೆಗೆ ಸೀಮಿತರಾಗುವುದರಿಂದಾಗಿ ಅಂತಿಮ ಗಳಿಗೆಯಲ್ಲಿ ತಜ್ಞರ ಬಳಿಗೆ ಬಂದು ಹೆಚ್ಚಿನ ಹಣ ಮತ್ತು ಸಮಯ ವ್ಯರ್ಥ ಮಾಡುವ ಪರಿಸ್ಥಿತಿ ಇದೆ.
ಕೆಲವೊಂದು ಸಂದರ್ಭದಲ್ಲಿ ಕಣ್ಣು ಕಳೆದುಕೊಂಡಿದ್ದೂ ಉಂಟು. ಹೀಗಾಗಿ ಸ್ವಲ್ಪ ಕಣ್ಣಿನ ತೊಂದರೆ ಆದ ತಕ್ಷಣ ಆಸ್ಪತ್ರೆಗೆ ಬಂದರೆ ತ್ವರಿತ ಚಿಕಿತ್ಸೆ ಮೂಲಕ ಅಲ್ವಾವಧಿಯಲ್ಲೇ ರೋಗವನ್ನು ಗುಣಪಡಿಸಬಹುದಾಗಿದೆ ಎಂದು ಡಾ.ಉದಯಕುಮಾರ್ ತಿಳಿಸಿದರು.
ಶಿಬಿರದಲ್ಲಿ ಕಣ್ಣಿನಪೊರೆ, ಗ್ಲೂಕೋಮಾ, ಡಯಾಬಿಟಿಕ್ ರೆಟಿನೋಪತಿ, ಕಣ್ಣಲ್ಲಿ ನೀರು ಸೋರುವುದು, ತಲೆನೋವು, ಸಮೀಪ ದೃಷ್ಟಿ, ದೂರದೃಷಿ, ಕಣ್ಣಿರೆಪ್ಪೆ ಸಮಸ್ಯೆಗಳನ್ನು ಪರಿಶೀಲಿಸಿ ಚಿಕಿತ್ಸೆ ನೀಡಲಾಯಿತು. ಅಗತ್ಯ ಇರುವವರಿಗೆ ಉಚಿತವಾಗಿ ಕಣ್ಣಿನ ಆಪರೇಷನ್ ಮಾಡಲು ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಚರ್ಮ ರೋಗ ತಜ್ಞೆ ಅಕ್ಷಯ ಮಾತನಾಡಿ, ಆಸ್ಪತ್ರೆಯಿಂದ ಈಗಾಗಲೇ ೫೦ಕ್ಕೂ ಹೆಚ್ಚು ಶಿಬಿರಗಳನ್ನು ಆಯೋಜಿಸಲಾಗಿದ್ದು ಬಿಪಿ ಮತ್ತು ಶುಗರ್ ಫ್ರೀಯಾಗಿ ಚೆಕ್ ಮಾಡಲಾಗಿದೆ. ಆಧುನಿಕ ಆಹಾರ ಪದ್ಧತಿ ಮತ್ತು ಒತ್ತಡದಿಂದಾಗಿ ಗ್ರಾಮೀಣ ಭಾಗದಲ್ಲೂ ಮಧುಮೇಹ ಮಿತಿಮೀರಿದೆ ಎಂದು ನುಡಿದರು. ಮಧ್ಯಾಹ್ನ ೩ ಗಂಟೆವರೆಗೆ ಸುಮಾರು ನೂರಕ್ಕೂ ನೇತ್ರ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಯಶಸ್ವಿನಿ ಸಮನ್ವಯ ಅಧಿಕಾರಿ ಹರೀಶ್ ಮಾಹಿತಿ ನೀಡಿದ್ದಾರೆ.
