ಉದಯವಾಹಿನಿ, ವಿಜಯಪುರ : ಜೀವನದಲ್ಲಿ ಸಮಾಜವು ನಮಗೆ ಉತ್ತಮ ಸ್ಥಾನಮಾನ, ಆರ್ಥಿಕತೆ, ನೆಮ್ಮದಿ ಎಲ್ಲವನ್ನು ನೀಡಿರುತ್ತದೆ. ಅದನ್ನು ಸಮಾಜದಿಂದ ಪಡೆದುಕೊಂಡ ನಾವು ಅವಶ್ಯಕತೆ ಇರುವಂತಹವರಿಗೆ ಮರು ಹಿಂದಿರುಗಿಸುವಂಥವರಾಗಬೇಕೆಂದು ಖ್ಯಾತ ಲೇಖಕಿ ಇಂದಿರಾಶಿವಣ್ಣ ರವರು ತಿಳಿಸಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರದಂದು ಹಿರಿಯ ವಿದ್ಯಾರ್ಥಿಗಳ ಕೂಟದ ವತಿಯಿಂದ ಏರ್ಪಡಿಸಲಾಗಿದ್ದ “ಹಳೆಯ ವಿದ್ಯಾರ್ಥಿ ವೃಂದದವರ ಸಮ್ಮಿಲನ” ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶಾಲೆಯ ಅಭಿವೃದ್ಧಿಗೆ ಅವಶ್ಯಕವಾಗಿ ಕೈಗೊಳ್ಳಬೇಕಾದ ಜವಾಬ್ದಾರಿಗಳನ್ನು ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ನಾವುಗಳು ನೆರವೇರಿಸಬೇಕೆಂದು ಹಾಗೂ ೨೦೨೪-೨೫ ನೇ ಸಾಲಿನಲ್ಲಿ ನಾವುಗಳು ಕಲಿತು ವಿದ್ಯಾವಂತರಾದ ಈ ಶಾಲೆಯು ೭೫ ನೇಯ ವರ್ಷದ ಅಮೃತ ಮಹೋತ್ಸವ ಆಚರಿಸಲಿದ್ದು, ಅದನ್ನು ಅವಿಸ್ಮರಣೀಯವಾಗುವಂತೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರಾದ ವೆಂಕಟೇಶ್‌ರವರು ಮಾತನಾಡಿ, ಈಗಾಗಲೇ ಸರ್ಕಾರದಿಂದ ರಚಿತವಾದ ಶಾಲಾ ಅಭಿವೃದ್ಧಿ ಸಮಿತಿ ಕಾರ್ಯ ನಿರ್ವಹಿಸುತ್ತಿದ್ದು, ಅದರೊಂದಿಗೆ ಹಿರಿಯ ವಿದ್ಯಾರ್ಥಿಗಳ ಸಂಘವು ಸೇರಿಕೊಂಡು ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕೆಂದು, ಈಗಾಗಲೇ ಹಲವು ದಾನಿಗಳ ಸಹಕಾರದೊಂದಿಗೆ ಶಾಲೆಯಲ್ಲಿ ನೆಲಹಾಸುಗಳನ್ನು ಹಾಸಿದ್ದು, ಮುಂದಿನ ವಾರದಂದು ಶಾಲಾ ವಾರ್ಷಿಕೋತ್ಸವ ಏರ್ಪಡಿಸಲಾಗಿದ್ದು, ಆ ಸಂದರ್ಭದಲ್ಲಿ ಬೆಂಗಳೂರಿನ ದಾನಿಗಳ ಸಹಕಾರದೊಂದಿಗೆ ಶಾಲೆಯ ಎಲ್ಲಾ ಮಕ್ಕಳಿಗೂ ಕ್ರೀಡಾ ಸಮವಸ್ತ್ರವನ್ನು ವಿತರಿಸಲಿರುವುದಾಗಿ ತಿಳಿಸಿದ್ದು, ಕಳೆದ ನಾಲ್ಕೈದು ವರ್ಷಗಳಿಂದಲೂ ಶಾಲೆಯ ಎಸ್ ಎಸ್ ಎಲ್ ಸಿ ಫಲಿತಾಂಶ ಶೇ ೭೫ ರಿಂದ ೯೦ ರ ವರೆಗೆ ಪಡೆದುಕೊಳ್ಳುತ್ತಿದ್ದು, ಇನ್ನು ಶಾಲೆಯ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿದರೆ, ಸರ್ಕಾರಿ ಶಾಲೆಯಾದರೂ ಖಾಸಗಿ ಶಾಲೆಗಳನ್ನು ಮೀರಿಸುವಂತಹ ಉತ್ತಮ ಶಿಕ್ಷಣವನ್ನು, ಸೌಲಭ್ಯಗಳನ್ನು, ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡಬಹುದೆಂದು, ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!