
ಉದಯವಾಹಿನಿ, ಕೋಲಾರ : ಕಾಂಗ್ರೇಸ್ ಪಕ್ಷದವರು ಚುನಾವಣೆಯಲ್ಲಿ ದೀನದಲಿತರ ಆರಾಧ್ಯ ದೈವ ಅಂಬೇಡ್ಕರ್‌ರನ್ನು ಸೋಲಿಸಿದವರಿಗೆ ಪದ್ಮಭೂಷಣ ಕೊಟ್ಟವರು, ವಿಧಿವಶರಾದಾಗ ಅಂತ್ಯಸಂಸ್ಕಾರಕ್ಕೂ ಜಾಗ ನೀಡದೇ ಅಮಾನವೀಯವಾಗಿ ನಡೆದುಕೊಂಡವರು, ಇದೀಗ ಎಸ್ಸಿಪಿ, ಎಸ್‌ಟಿಪಿಯಡಿಯ ಪರಿಶಿಷ್ಟರ ೧೪೨೮೦ ಕೋಟಿ ಅನುದಾನ ಕಬಳಿಸಿ ೧೫ ಕೋಟಿ ಖರ್ಚು ಮಾಡಿ ದಲಿತರನ್ನು ಯಾಮಾರಿಸಲು ಐಕ್ಯತಾ ಸಮಾವೇಶ ಮಾಡುತ್ತಿದ್ದಾರೆಂದು ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.
ತಾಲ್ಲೂಕಿನ ಶಿಳ್ಳೆಂಗೆರೆ ಗ್ರಾಮದಲ್ಲಿ ಅಂಬೇಡ್ಕರ್ ಪ್ರಜ್ಞಾವಂತ ಯುವಕರ ಸಂಘದ ಆಶ್ರಯದಲ್ಲಿ ನಿರ್ಮಿಸಲಾದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.
ಅಂಬೇಡ್ಕರ್ ಜೀವಿನವಿಡಿ ಕಷ್ಟಪಟ್ಟು ಸಂವಿಧಾನದ ಮೂಲಕ ಶೋಷಿತರಿಗೆ ಅಮೃತ ನೀಡಿದ್ದಾರೆ, ದಲಿತರು ಎಂದರೆ ಪರಿಶಿಷ್ಟರು ಮಾತ್ರವಲ್ಲ ಎಲ್ಲಾ ಜಾತಿ, ಧರ್ಮದ ಬಡವರೂ ದಲಿತರೇ ಎಂದು ಸಾರಿದ್ದಾರೆ ಎಂದು ತಿಳಿಸಿದರು,.
ಅಂಬೇಡ್ಕರ್‌ರನ್ನು ಚುನಾವಣೆಯಲ್ಲಿ ಸೋಲಿಸಿದ ವ್ಯಕ್ತಿಗೆ ಪದ್ಮಭೂಷಣ ನೀಡಲಾಯಿತು, ಅವರ ವಿಧಿವಶರಾದಾಗ ದೆಹಲಿಯಲ್ಲಿ ಜಾಗ ನೀಡಲಿಲ್ಲ, ಮುಂಬೈಗೆ ಸಾಗಿಸಲು ಏರ್ ಆಂಬ್ಯುಲೆನ್ಸ್‌ಗೆ ೫ ಸಾವಿರ ನೀಡಲು ಅಂದು ಆಡಳಿತದಲ್ಲಿದ್ದ ಸರ್ಕಾರ ಮುಂದೆ ಬರಲಿಲ್ಲ, ಅಂತಹವರು ಈಗ ಮಾತು ಮಾತಿಗೂ ಓಟಿಗಾಗಿ ನಾವು ಅಂಬೇಡ್ಕರ್ ಪರ ಅಂತ ಮಾತನಾಡುತ್ತಿದ್ದಾರೆ ಇದರ ಬಗ್ಗೆ ದಲಿತರ ಎಚ್ಚರವಹಿಸಬೇಕು ಎಂದು ಕಿವಿಮಾತು ಹೇಳಿದರು.
ಮೋದಿ ಗುಜರಾತ್ ಸಿಎಂ ಆಗಿದ್ದಾಗ ೨೦೧೦ ರಲ್ಲಿ ಸಂವಿಧಾನ ದಿನಾಚರಣೆ ಮಾಡಿ ಸಂವಿಧಾನವನ್ನು ದಸರಾ ಮಾದರಿ ಮೆರವಣಿಗೆ ನಡೆಸುವ ಮೂಲಕ ಸಂವಿಧಾನದ ಮಹತ್ವವನ್ನು ಸಮಾಜ ಮತ್ತು ದೇಶಕ್ಕೆ ತೊರಿಸಿಕೊಟ್ಟಿದ್ದರು ಎಂದು ಸ್ಮರಿಸಿದರು. ಅಂಬೇಡ್ಕರ್ ಸಂವಿಧಾನ ಇಲ್ಲವಾದಲ್ಲಿ ಟೀ ಮಾರುವ ವ್ಯಕ್ತಿ ಈ ದೇಶದ ಪ್ರಧಾನಿಯಾಗುತ್ತಿರಲಿಲ್ಲ ಎಂದು ಮೋದಿಯವರೇ ಹೇಳಿದ್ದಾರೆ ಎಂದರು.
ಅಂಬೇಡ್ಕರ್ ಹಿಂದೂಕೋಟ್‌ಬಿಲ್ ತಂದಾಗ ವಿರೋಧಿಸಿದವರು ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡರು ಆದರೆ ಅವರಿಗೆ ಸಂವಿಧಾನ ಬರೆದ ಮಹನೀಯನ ನೆನಪು ಆಗಲಿಲ್ಲ ಆದರೆ ಬಿಜೆಪಿ ಸರ್ಕಾರವೇ ಬಂದು ಭಾರತ ರತ್ನ ನೀಡಬೇಕಾಯಿತು ಎಂದು ಹೇಳಿದರು.
