ಉದಯವಾಹಿನಿ, ಕೋಲಾರ: ಕೋಲಾರ ಕ್ರೀಡಾ ಸಂಘವು ಕೋಲಾರ ನಗರದ ಟೇಕಲ್ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಮಕ್ಕಳ ಉದ್ಯಾವನದಲ್ಲಿ ದಿವಂಗತ ಡಿ. ಸುಧಾಕರ್ ಸ್ಮರಣಾರ್ಥ ಹಮ್ಮಿಕೊಂಡಿರುವ ೩೭ನೇ ವರ್ಷದ ಬೇಸಿಗೆ ತರಬೇತಿ ಶಿಬಿರವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಉದ್ಘಾಟಿಸಿದರು.
ಶಿಬಿರಾರ್ಥಿಗಳ ಕುರಿತು ಮಾತನಾಡಿದ ಅವರು, ಕೀಳಿರಿಮೆಯಿಂದ ಮನುಷ್ಯ ಹಿಂದುಳಿಯುತ್ತಾನೆ. ಸಿಕ್ಕ ಅವಕಾಶವನ್ನು ಯಾರು ಸಮರ್ಥವಾಗಿ ಬಳಸಿಕೊಳ್ಳುತ್ತಾರೋ ಅವರು ಮಾತ್ರವೇ ಸಾಧನೆಯ ಶಿಖರವನ್ನೇರುತ್ತಾರೆ ಎಂದುಅಭಿಪ್ರಾಯ ಪಟ್ಟರು.
ಆರಂಭ ಶೂರತ್ವವನ್ನು ತೋರದೇ ೩೭ ವರ್ಷಗಳಿಂದ ಸತತವಾಗಿ ಉಚಿತ ಬೇಸಿಗೆ ಶಿಬಿರವನ್ನು ನಡೆಸಿಕೊಂಡು ಬರುತ್ತಿರುವ ಸಂಘದ ಬಗ್ಗೆ ಮತ್ತು ಸಂಘದ ಹೊಸ ಪ್ರಯತ್ನ ಮಕ್ಕಳ ಬಯಲುಗ್ರಂಥಾಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ದಿವಂಗತ ಸುಧಾಕರ್‌ರವರ ಬಗ್ಗೆ ಮಾತನಾಡಿ ಅತ್ಯಂತ ಶಿಸ್ತುಬಧ್ಧ ದೈಹಿಕ ಶಿಕ್ಷಕರಾಗಿ ಅವರು ಗಳಿಸಿದ ಪ್ರೀತಿ, ಕ್ರೀಡಾಕ್ಷೇತ್ರದಲ್ಲಿಅವರ ಸಾಧನೆಯನ್ನುಇದೇ ಸಂದರ್ಭದಲ್ಲಿ ಸ್ಮರಿಸಿದರು.
ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಕೋಲಾರದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಕೋಲಾರ ಕ್ರೀಡಾ ಸಂಘವು ಎಲ್ಲಾ ಸಂಘಗಳಿಗಿಂತಲೂ ಮುಂಚೂಣಿಯಲ್ಲಿದೆ. ಈ ಸಂಘವು ಪ್ರತಿವರ್ಷಉಚಿತ ಬೇಸಿಗೆ ಶಿಬಿರ ನಡೆಸುತ್ತಿರುವ ಕಾರಣ ಇತ್ತೀಚೆಗೆ ನಾಯಿಕೊಡೆಗಳಂತೆ ಏಳುತ್ತಿರುವ ಕಮರ್ಶಿಯಲ್ ಶಿಬಿರಗಳಿಗೆ ಕೋಲಾರದಲ್ಲಿ ಅವಕಾಶವಾಗುತ್ತಿಲ್ಲ.
ಈ ಸಂಘವನ್ನು ದಿವಂಗತ ದೈಹಿಕ ಶಿಕ್ಷಕರಾದ ಸುಧಾಕರ್ ಮತ್ತು ಹಿರಿಯ ಕ್ರೀಡಾಪಟು ಪುರುಷೋತ್ತಮ್‌ರವರು ಉತ್ತಮವಾಗಿ ಸಂಘಟಿಸಿದ್ದಾರೆ. ಇದೇ ರೀತಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸಂಘದ ಸದಸ್ಯರ ನಿಸ್ವಾರ್ಥ ಸೇವೆಯೇ ಸಂಘವನ್ನು ಈ ಎತ್ತರಕ್ಕೆ ಬೆಳೆಸಿದೆ ಎಂದು ಅಭಿಪ್ರಾಯ ಪಟ್ಟರು.
ಕೋಲಾರ ಕ್ರೀಡಾ ಸಂಘದ ತರಬೇತಿಯಿಂದಲೇ ಜಿಲ್ಲೆಯ ೨೫ ಕ್ಕೂ ಹೆಚ್ಚು ಮಂದಿ ಯುವಕರು ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆಗೆ ಆಯ್ಕೆಯಾಗುವಂತಾಯಿತು ಎಂದು ಶ್ಲಾಘಿಸಿದರು.

Leave a Reply

Your email address will not be published. Required fields are marked *

error: Content is protected !!