ಉದಯವಾಹಿನಿ, ಮಾಲೂರು: ಪ್ರಸಿದ್ದ ಯಾತ್ರಾಸ್ಥಳವಾದ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ಕಾರ್‍ಯಕ್ರಮಗಳು ಏ.೧೪ ರಿಂದ ಏ.೨೩ ರವರೆಗೆ ಸಂಪ್ರದಾಯಬದ್ದವಾಗಿ ಆಚರಣೆ ಮಾಡುತ್ತಿದ್ದು, ೧೦ ದಿನಗಳ ಕಾಲ ನಾನಾ ರೀತಿಯ ಉತ್ಸವಗಳು ನಡೆಯುತ್ತಿದ್ದು, ಉತ್ಸವಗಳ ಸೇವಾಕರ್ತರನ್ನು ಕರೆಯಿಸಿ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದೇವಾಲಯದ ಕಾರ್‍ಯನಿರ್ವಾಹಕ ಅಧಿಕಾರಿ ಟಿ.ಸೆಲ್ವಮಣಿ ಹೇಳಿದರು.
ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಕಚೇರಿಯ ಸಭಾಂಗಣದಲ್ಲಿ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವದ ಅಂಗವಾಗಿ ೧೦ ದಿನಗಳ ಕಾಲ ನಾನಾ ರೀತಿಯ ಉತ್ಸವಗಳ ಸೇವಾಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ಬ್ರಹ್ಮರಥೋತ್ಸವ ಕಾರ್‍ಯಕ್ರಮಗಳನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಅದೇರೀತಿ ಈ ವರ್ಷವೂ ಸಹ ಬ್ರಹ್ಮರಥೋತ್ಸವ ಕಾರ್‍ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಡುವ ನಿಟ್ಟಿನಲ್ಲಿ ಈಗಾಗಲೇ ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ವೈಖಾನಸಾಗಮರೀತ್ಯಾ ನವಾಹ್ನಿಕ ಪೂರ್‍ವಕ ತದಂಗವಾಗಿ ಉತ್ಸವ ಸೇವೆಗಳು ನಡೆಯಲಿವೆ. ಚೈತ್ರ ಮಾಸದ ಬ್ರಹ್ಮರಥೋತ್ಸವ ಕಾರ್‍ಯಕ್ರಮವು ಏ.೧೪ ರಿಂದ ಏ.೨೩ ರವರೆಗೆ ನಡೆಯಲಿದೆ. ಪ್ರಸ್ತುತ ವರ್ಷದ ಜಾತ್ರಾ ಮಹೋತ್ಸವದ ಸಮಯದಲ್ಲೇ ಲೋಕಸಭಾ ಚುನಾವಣೆಯು ನಡೆಯುತ್ತಿದ್ದು, ಚುನಾವಣಾ ಆಯೋಗವು ಉತ್ಸವ ಕಾರ್‍ಯಕ್ರಮಗಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ.
