ಉದಯವಾಹಿನಿ,ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಮುಖ ಇಬ್ಬರು ಉಗ್ರರ ಬಗ್ಗೆ ಒಂದೊಂದೇ ರಹಸ್ಯಗಳು ಬಯಲಾಗುತ್ತಿವೆ.ಬಾಂಬರ್ ಮುಸಾವೀರ್ ಹುಸೇನ್ ಶಾಜಿಬ್ ಮತ್ತು ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹ ಬಳಿ ನಕಲಿ ಆಧಾರ್ ಕಾರ್ಡ್ಗಳು ಪತ್ತೆಯಾಗಿವೆ. ಈ ಇಬ್ಬರು ನಕಲಿ ಆಧಾರ್ ಮಾಡಿಸಿಕೊಂಡಿರುವುದಲ್ಲದೇ ಹಿಂದೂ ಹೆಸರಿಟ್ಟುಕೊಂಡು ಯಾರಿಗೂ ಅನುಮಾನ ಬಾರದಂತೆ ಸುತ್ತಾಡುತ್ತಿದ್ದರು.
ಎನ್ಐಎ ಅಧಿಕಾರಿಗಳು ಹಾಗೂ ಪಶ್ಚಿಮ ಬಂಗಾಳ ಪೊಲೀಸರು ಈ ಇಬ್ಬರನ್ನು ಕೋಲ್ಕತಾದಲ್ಲಿ ಬಂಧಿಸಿದಾಗ ಇಬ್ಬರು ಬಳಿಯೂ ನಕಲಿ ಆಧಾರ್ ಕಾರ್ಡ್ಗಳು ಪತ್ತೆಯಾಗಿರುವುದು ಹಲವು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಕಲಬುರಗಿಯ ವರ್ದಾ ನಗರದ ನಿವಾಸಿಯಾಗಿರುವ ಸಾಫ್ಟ್ವೆರ್ ಎಂಜಿನಿಯರ್ ಅನಮೂಲ ಕುಲಕರ್ಣಿ ಅವರ ಆಧಾರ್ ಕಾರ್ಡ್ ಉಗ್ರರ ಬಳಿಯಿದ್ದು, ಇವರಿಗೆ ಆಧಾರ್ ಕಾರ್ಡ್ ಹೇಗೆ ಸಿಕ್ಕಿತು ಎಂಬ ಬಗ್ಗೆ ವಿವಿಧ ದೃಷ್ಟಿಕೋನಗಳಲ್ಲಿ ಎನ್ಐಎ ಅಧಿಕಾರಿಗಳು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಅನಮೂಲ ಕುಲಕರ್ಣಿ ಅವರು ಪ್ರಸ್ತುತ ನಗರದ ಖಾಸಗಿ ಕಂಪನಿವೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಇವರ ಆಧಾರ್ ಕಾರ್ಡ್ ಉಗ್ರರ ಬಳಿ ಪತ್ತೆಯಾದ ಹಿನ್ನೆಲೆಯಲ್ಲಿ ಕುಲಕರ್ಣಿ ಅವರನ್ನು ಸಹ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಮಾ.1 ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ ನಂತರ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಸಂಚರಿಸುತ್ತಾ ಪ್ರತಿದಿನ ಜಾಗ ಬದಲಿಸುತ್ತಿದ್ದ ಬಾಂಬರ್ ಮುಸಾವೀರ್ ಹುಸೇನ್ ಶಾಜಿದ್ ಬೆಂಬಲಕ್ಕೆ ಯಾರ್ಯಾರು ಇದ್ದಾರೆ ಎಂಬ ಬಗ್ಗೆ ಎನ್ಐಎ ಅಧಿಕಾರಿಗಳು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
