ಉದಯವಾಹಿನಿ, ವಿಜಯಪುರ: ಈಗಿನಂತೆ ಒಂದು ವರ್ಷದ ಮೊದಲೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಹೊಂದಾಣಿಕೆಯಾಗಿದ್ದರೆ ಈಗಿನ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುತ್ತಿರಲಿಲ್ಲ ಹಾಗೂ ಎರಡು ಪಕ್ಷಗಳ ಕಾರ್ಯಕರ್ತರಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲವೆಂದು ಜೆಡಿಎಸ್ ನ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ಅವರು ಶುಕ್ರವಾರದಂದು ವಿಜಯಪುರ ಹೋಬಳಿ ಗೊಡ್ಲು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಂಯುಕ್ತ ಸಭೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು ಬಹಳ ವಿಶಾಲವಾಗಿ ದೊಡ್ಡದಿದ್ದು ಎಲ್ಲೆಡೆ ಅಭ್ಯರ್ಥಿಗಳನ್ನು ಕರೆದುಕೊಂಡು ಬಂದು ಪ್ರಚಾರ ಮಾಡಿಸಲು ಸಾಧ್ಯವಾಗದ ಕಾರಣ ಸ್ಥಳೀಯ ಎರಡು ಪಕ್ಷಗಳ ಮುಖಂಡರುಗಳೇ ಪ್ರತಿ ಗ್ರಾಮಗಳಲ್ಲಿಯೂ ಪ್ರತಿ ಬೂತ್ ಮಟ್ಟದಲ್ಲಿಯೂ ಕಾರ್ಯಕ್ರಮಗಳನ್ನು ನಿರ್ವಹಿಸಿ ಮತದಾರರ ಮನವೊಲಿಸಿ ಮತಗಳನ್ನು ಹಾಕಿಸುವಂಥ ಕೆಲಸ ಆಗಬೇಕೆಂದು ತಿಳಿಸಿದರು.
ಚುನಾವಣೆ ನಡೆದು ಫಲಿತಾಂಶ ಬಂದ ನಂತರ ಒಬ್ಬರ ಮೇಲೆ ಒಬ್ಬರು ಹಾಗೆ ಆಗಬೇಕಿತ್ತು ಈಗಾಗಬೇಕಿತ್ತು ಎಂದು ಗೂಬೆ ಕೂರಿಸುವಂತಹ ಕೆಲಸ ಬೇಡ ಯಾವುದೇ ಪಕ್ಷದಲ್ಲಿ ಯಾವುದೇ ವ್ಯತ್ಯಾಸಗಳಿದ್ದರೂ ಸಹ ಜೆಡಿಎಸ್ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷರು ಹಾಗೂ ಮುಖಂಡರುಗಳ ಬಳಿ ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ತಿಳಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷರಾದ ಕಾರಳ್ಳಿ ಮುನೇಗೌಡರವರು ಮಾತನಾಡುತ್ತಾ, ಕಾರ್ಯಕರ್ತರು ಹಾಗೂ ಮುಖಂಡರುಗಳು ಬೂತ್ ಮಟ್ಟದಲ್ಲಿ “ಕಾರ್ಯವಾಸಿ ಕತ್ತೆ ಕಾಲು ಹಿಡಿ” ಎಂಬ ಗಾದೆ ತಪ್ಪಲ್ಲ ಎಂಬಂತೆ ಹೇಗಾದರೂ ಸರಿಯೇ ಎನ್ ಡಿ ಎ ಅಭ್ಯರ್ಥಿಗೆ ಮತ ಹಾಕಿಸುವಂತಹ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರಾದ ಜಿ ಚಂದ್ರಣ್ಣ ಮಾತನಾಡಿ,ಇಂದಿನಿಂದಲೇ ಇರುವ ಅಲ್ಪಸಮಯದಲ್ಲಿಯೇ ಅಭ್ಯರ್ಥಿ ಕೆ ಸುಧಾಕರ್ ರವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಬೇಕೆಂದು ತಿಳಿಸಿದರು.
ಮಾಜಿ ಶಾಸಕ ಪಿಳ್ಳಮುನಿಶ್ಯಾಮಪ್ಪ ಮಾತನಾಡಿ, ಯಾವುದೇ ಕಾರಣಕ್ಕೂ ಮತದಾನ ಮಾಡುವ ಸಂದರ್ಭದಲ್ಲಿ ಜೆ.ಡಿ.ಎಸ್ ಕಾರ್ಯಕರ್ತರು ತೆನೆ ಹೊತ್ತ ಮಹಿಳೆಯ ಚಿಹ್ನೆಗಾಗಿ ಹುಡುಕುವಂತಹ ತಪ್ಪು ಮಾಡದೇ, ನಾಲ್ಕನೇ ಸಂಖ್ಯೆಯ ಕಮಲದ ಚಿಹ್ನೆ ಇರುವ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್‌ರವರಿಗೆ ಮತ ನೀಡುವಂತೆ ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.
