ಉದಯವಾಹಿನಿ,ಚನ್ನಪಟ್ಟಣ: ತಾಲ್ಲೂಕಿನ ಬಿಡದಿ ಪಟ್ಟಣ ಹಾಗೂ ಚನ್ನಪಟ್ಟಣದಲ್ಲಿ ಶುಕ್ರವಾರ ಸಾಧಾರಣ ಮಳೆಯಾಯಿತು. ಬಿಸಿಲ ಬೇಗೆಗೆ ಹೈರಾಣಾಗಿದ್ದ ಜನರಿಗೆ ಮಳೆಯು ತಂಪನ್ನೆರೆಯಿತು.
ಬಿಡದಿಯಲ್ಲಿ ಮಧ್ಯಾಹ್ನ 3.30ರ ಹೊತ್ತಿಗೆ ಭಾರೀ ಗಾಳಿಯೊಂದಿಗೆ ಶುರುವಾದ ಮಳೆಯು ಗುಡುಗು ಮಿಂಚು ಸಮೇತ ಸುಮಾರು 40 ನಿಮಿಷ ಸುರಿಯಿತು.ಚನ್ನಪಟ್ಟಣದಲ್ಲಿ ಸಂಜೆ 5ರ ಹೊತ್ತಿಗೆ ಶುರುವಾದ ಮಳೆ ಮುಕ್ಕಾಲು ತಾಸು ಸುರಿಯಿತು. ಮಳೆ ಅಬ್ಬರಕ್ಕೆ ಚರಂಡಿಗಳು ತುಂಬಿ ಹರಿದವು.
ರಸ್ತೆ ತಗ್ಗು ಮತ್ತು ಗುಂಡಿಗಳು ಜಲಾವೃತಗೊಂಡವು. ಬಿಸಿಲ ಧಗೆಗೆ ಕಾದ ಬಾಣಲಿಯಂತಾಗಿದ್ದ ಭೂಮಿ ತಣ್ಣಗಾಯಿತು.
ಎರಡೂ ಕಡೆ ವರ್ಷದ ಮೊದಲ ವರ್ಷಧಾರೆಯು ಜನರ ಮುಖದಲ್ಲಿ ಖುಷಿ ತಂದಿತು. ಮಳೆಯನ್ನೇ ಎದುರು ನೋಡುತ್ತಿದ್ದ ರೈತರು ಮೊಗದಲ್ಲಿ ಮುಗುಳ್ನಗೆ ಬಂದಿತು. ದಿಢೀರ್ ಸುರಿದ ಮಳೆಯಲ್ಲಿ ರಕ್ಷಣೆ ಪಡೆಯಲು ಜನ ಪರದಾಡಿದರು. ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ಒದ್ದೆಯಾದರು. ಕೆಲವರು ಅಕ್ಕಪಕ್ಕದ ಕಟ್ಟಡಗಳ ಬಳಿ ನಿಂತು ನೆನೆಯದಂತೆ ಆಶ್ರಯ ಪಡೆದರು.
ಮಳೆಯಿಂದಾಗಿ ವಾಹನಗಳ ಸಂಚಾರಕ್ಕೂ ಕೆಲವೆಡೆ ತೊಂದರೆಯಾಯಿತು. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ಅಬ್ಬರಕ್ಕೆ ಕೆಲವೆಡೆ ರಸ್ತೆಯಲ್ಲಿ ಹೆಚ್ಚಿನ ನೀರು ಹರಿದಿದ್ದರಿಂದ ವಾಹನಗಳ ಸಂಚಾರ ಮಂದಗತಿಯಲ್ಲಿ ಸಾಗಿತು. ಕೆಲವೆಡೆ ಸಂಚಾರದಟ್ಟಣೆ ಕಂಡುಬಂತು.
