ಉದಯವಾಹಿನಿ, ಕುದೂರು: ಮುಂದಿನ ಎರಡು ವರ್ಷದೊಳಗೆ ಮಾಗಡಿ ತಾಲ್ಲೂಕಿನ ಎಲ್ಲ ಕೆರೆಗಳಿಗೂ ಶ್ರೀರಂಗ ಏತ ನೀರಾವರಿ ಯೋಜನೆ ಎಕ್ಸ್ ಪ್ರೆಸ್‌ ಲಿಂಕ್ ಕೆನಾಲ್ ಮೂಲಕ ನೀರು ತುಂಬಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂದಿನ ಹತ್ತು ವರ್ಷಗಳವರೆಗೂ ಗ್ಯಾರಂಟಿ ಯೋಜನೆಗಳು ಇರುತ್ತವೆ. ವಿರೋಧ ಪಕ್ಷದಗಳ ಟೀಕೆಗಳಿಗೆ ಜನರು ಕಿವಿಗೊಡಬಾರದು ಎಂದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ ರೇವಣ್ಣ ಮಾತನಾಡಿ, ರಾಜ್ಯಕ್ಕೆ ತೆರಿಗೆ ವಿಷಯದಲ್ಲಿ ಆದ ಅನ್ಯಾಯವನ್ನು ಡಿ.ಕೆ ಸುರೇಶ್ ಪ್ರಶ್ನಿಸಿದ್ದಾರೆ. ದೇಶದಲ್ಲಿ ನರೇಗಾದಲ್ಲಿ ಅತಿ ಹೆಚ್ಚು ಕಾಮಗಾರಿ ನಡೆಸಿರುವುದು ಡಿ.ಕೆ ಸುರೇಶ್. ಸಂಸತ್ ಸದಸ್ಯನಾಗಿ ಪಂಚಾಯಿತಿ ಸದಸ್ಯನಂತೆ ಸಾಮಾನ್ಯ ಜನರ ಕಷ್ಟ ಸುಖ ಆಲಿಸುವ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜ್ಯದ 28 ಸಂಸದರಲ್ಲಿ ಸದನದಲ್ಲಿ ರಾಜ್ಯದ ಹಿತ ಕಾಪಾಡುವ ಏಕೈಕ ಸಂಸದ ಡಿ.ಕೆ ಸುರೇಶ್. ಅವರನ್ನು ಗೆಲ್ಲಿಸುವ ಮೂಲಕ ರಾಕ್ಷಸ ಪ್ರವೃತ್ತಿ ದುಷ್ಟ ಶಕ್ತಿ ಬಿಜೆಪಿಯನ್ನು ಮಟ್ಟ ಹಾಕಬೇಕಿದೆ ಎಂದರು. ಶಾಸಕ ಎಚ್.ಸಿ ಬಾಲಕೃಷ್ಣ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ಯಾವುದೇ ಅನುದಾನ ಕೊಟ್ಟಿಲ್ಲ. ಕೊಟ್ಟಿರುವುದು ಕೇವಲ ಚೊಂಬು ಎಂದು ಟೀಕಿಸಿದರು.

 

Leave a Reply

Your email address will not be published. Required fields are marked *

error: Content is protected !!