ಉದಯವಾಹಿನಿ, ಕೋಲಾರ: ‘ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಈಗ ಭ್ರಮೆಯಲ್ಲಿದ್ದಾರೆ’ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದರು.ನಗರದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಮುಖಂಡರು ಹಾಗೂ ಮುಸ್ಲಿಂ ಸಮುದಾಯದವರ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮಂಡ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿ ಮೊದಲು ಗೆಲ್ಲಲಿ ನೋಡೋಣ.
ನಂತರ ಕೇಂದ್ರ ಸಚಿವರಾಗುವ ಮಾತು’ ಎಂದರು.’ಮುಖ್ಯಮಂತ್ರಿ ಆಗಿದ್ದಾಗಲೇ ಮಂಡ್ಯದಲ್ಲಿ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳಲು ಇವರಿಗೆ ಸಾಧ್ಯವಾಗಲಿಲ್ಲ. ಈಗ ಬಹಳ ಆತ್ಮವಿಶ್ವಾಸದಿಂದ ಇದ್ದಾರೆ’ ಎಂದು ವ್ಯಂಗ್ಯವಾಡಿದರು.ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿ, ‘ಈ ಬಾರಿ ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದು. ದೇಶದ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ’ ಎಂದು ಮನವಿ ಮಾಡಿದರು.
‘ಬಿಜೆಪಿಯವರು ಹಿಂದೂ ಮುಸ್ಲಿಂ ಎಂದು ಮತ ಕೇಳುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಬೇಕಿಲ್ಲ. ಹತ್ತು ವರ್ಷಗಳಲ್ಲಿ ಅವರ ಸಾಧನೆ ಶೂನ್ಯ. ಬಡವರ ಬ್ಯಾಂಕ್ ಖಾತೆಗೆ ₹ 15 ಲಕ್ಷ ಜಮೆ ಮಾಡುವುದು ಸೇರಿ ಯಾವ ಭರವಸೆಯೂ ಈಡೇರಿಸಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.’ಈಗ ಯಾರ ಅಲೆಯೂ ಇಲ್ಲ. ಕೋಮುವಾದಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ಗೆ ಸಮುದಾಯ ಒಂದೂ ಮತ ಹಾಕಬಾರದು’ ಎಂದು ಮನವಿ ಮಾಡಿದರು. ಮೌಲಾನಾ ಕಲೀಂವುಲ್ಲಾ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್‌ ಸದಸ್ಯ ಅಬ್ದುಲ್ ಜಬ್ಬಾರ್, ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಮುಖಂಡರಾದ ಖಾಲಿದ್ ಅಹಮದ್, ಅಬ್ದುಲ್ ಖಯ್ಯುಮ್, ಭಕ್ಷು ಇದ್ದರು.

Leave a Reply

Your email address will not be published. Required fields are marked *

error: Content is protected !!