ಉದಯವಾಹಿನಿ, ಬೆಂಗಳೂರು: ಹುಲಿ ಯೋಜನೆಗೆ 50 ವರ್ಷ ತುಂಬಿದ ಅಂಗವಾಗಿ 2023ರ ಏಪ್ರಿಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆತಿಥ್ಯದ ಬಿಲ್‌ ಬಾಕಿಯನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ, ರಾಷ್ಟ್ರಪತಿ ಮೊದಲಾದ ಗಣ್ಯರು ಆಗಮಿಸಿದಾಗ ಆತಿಥ್ಯ ನೀಡುವುದು ರಾಜ್ಯ ಸರ್ಕಾರದ ಸಂಪ್ರದಾಯವಾಗುತ್ತದೆ.
ಆದರೆ ಕಳೆದ ವರ್ಷ ಏಪ್ರಿಲ್‌ನಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿತ್ತು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ರಾಜ್ಯ ಸರ್ಕಾರ ಈ ಕಾರ್ಯಕ್ರಮದ ಆಯೋಜನೆಯಲ್ಲಿ ಯಾವುದೇ ಪಾತ್ರ ವಹಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಉಂಟಾಗಿರುವ ಗೊಂದಲ ನಿವಾರಿಸಲು ರಾಜ್ಯ ಸರ್ಕಾರವೇ ಮೈಸೂರಿನ ರಾಡಿಸನ್‌ ಬ್ಲೂ ಹೊಟೆಲ್‌ ಬಿಲ್‌ ಬಾಕಿ ಪಾವತಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
2023ರ ಏಪ್ರಿಲ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಸಂಪೂರ್ಣವಾಗಿ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರವೇ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಒಟ್ಟಾರೆ 6 ಕೋಟಿ 33 ಲಕ್ಷ ರೂ. ವೆಚ್ಚವಾಗಿದ್ದು, ಎನ್‌.ಟಿ.ಸಿ.ಎ. ರಾಜ್ಯಕ್ಕೆ 3 ಕೋಟಿ ರೂ. ಪಾವತಿಸಿದೆ.
ಉಳಿದ ಹಣ ಪಾವತಿಸಿಲ್ಲ. ಹೀಗಾಗಿ ಮೈಸೂರಿನ ರಾಡಿಸನ್‌ ಬ್ಲೂ ಹೊಟೆಲ್‌ನವರು ಕಾರ್ಯಕ್ರಮದ ಆಯೋಜನೆಗೆ ಸ್ಥಳೀಯ ಬೆಂಬಲ ನೀಡಿದ್ದ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದರು. ರಾಜ್ಯ ಸರ್ಕಾರವೇ ಆತಿಥ್ಯದ 80 ಲಕ್ಷ ರೂ. ಹಣ ಪಾವತಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!