ಉದಯವಾಹಿನಿ, ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಿಂಗಳು ಕಳೆದರೂ ಪತ್ತೆಯಾಗಿಲ್ಲ. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಗಿದ ಬಳಿಕ ಅವರು ನಾಪತ್ತೆಯಾಗಿದ್ದಾರೆ. ರಾಜ್ಯ ಸರ್ಕಾರವು ಈ ಆರೋಪ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ್ದು, ತನಿಖೆ ನಡೆಯುತ್ತಿದೆ. ವಿಚಾರಣೆಗೆ ಹಾಜರಾಗಲು ಎಸ್‌ಐಟಿ ನೀಡಿದ್ದ ನೋಟಿಸ್‌ಗೆ ವಕೀಲರ ಮೂಲಕ ಒಂದು ವಾರ ಸಮಯ ಕೇಳಿದ್ದನ್ನು ಬಿಟ್ಟರೆ, ಈವರೆಗೆ ಪ್ರಜ್ವಲ್ ಸುಳಿವಿಲ್ಲ.
ಇಂದು ಬರುತ್ತಾರೆ, ನಾಳೆ ಬರುತ್ತಾರೆ, ಈ ದೇಶದಲ್ಲಿದ್ದಾರೆ. ಆ ದೇಶದಲ್ಲಿದ್ದಾರೆ ಎಂಬಂತಹ ವದಂತಿಗಳು ಹರಿದಾಡಿದವು ಅಷ್ಟೇ. ಅವರು ಎಲ್ಲಿದ್ದಾರೆ, ಯಾವಾಗ ಬರುತ್ತಾರೆ ಎಂಬ ಮಾಹಿತಿಯೂ ಈತನಕ ಲಭ್ಯವಿಲ್ಲ.
ಕುಟುಂಬದವರ ಸಂಪರ್ಕದಲ್ಲೂ ಪ್ರಜ್ವಲ್ ಇಲ್ಲವೆಂದು ಜೆಡಿಎಸ್ ಮುಖಂಡರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಪ್ರಜ್ವಲ್ ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದ್ದು, ಅವರನ್ನು ವಾಪಸ್ಸು ಕರೆತರುವ ಹಲವು ಪ್ರಯತ್ನಗಳು ನಡೆದರೂ ಈತನಕ ಫಲ ನೀಡಿಲ್ಲ. ಪ್ರಜ್ವಲ್ ಅವರ ರಾಜ ತಾಂತ್ರಿಕ ಪಾಸ್ ಪೋರ್ಟ್ ರದ್ದುಪಡಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಪಾಸ್ ಪೋರ್ಟ್ ರದ್ದತಿ ಪ್ರಕ್ರಿಯೆ ಆರಂಭಗೊಂಡಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಎಲ್ಲೇ ಇದ್ದರೂ ಕೂಡಲೇ ಎಸ್‌ಐಟಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸಬೇಕು. ಇಲ್ಲದಿದ್ದರೆ ಕುಟುಂಬದಿಂದಲೇ ಹೊರ ಹಾಕುವ ಎಚ್ಚರಿಕೆಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೀಡಿದ್ದಾರೆ. ಈ ಪ್ರಕರಣದಿಂದ ತುಂಬಾ ನೊಂದಿರುವ ಗೌಡರು ತಮ ಹುಟ್ಟುಹಬ್ಬದ ಆಚರಣೆಯನ್ನು ಖುಷಿಯಿಂದ ಆಚರಿಸಿಕೊಳ್ಳಲಿಲ್ಲ.
