ಉದಯವಾಹಿನಿ, ಬೆಂಗಳೂರು: ನೈರುತ್ಯ ಮುಂಗಾರು ಚೇತರಿಸಿಕೊಂಡಿದ್ದು, ಕೇರಳ, ಕೊಡಗು, ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಹಾಗೂ ಕೆಆರ್ಎಸ್ ಜಲಾಶಯಗಳ ನೀರಿನ ಮಟ್ಟ ನಿರಂತರ ಏರಿಕೆಯಾಗುತ್ತಿದೆ. ಕಬಿನಿ ಜಲಾಶಯ ಭರ್ತಿಯಾಗಲು ಕೇವಲ 3 ಅಡಿ ಮಾತ್ರ ಬಾಕಿಯಿದೆ. 2284 ಅಡಿ ಗರಿಷ್ಠ ಸಾಮರ್ಥ್ಯ ಇರುವ ಕಬಿನಿ ಜಲಾಶಯದಲ್ಲಿ ಇಂದು 2281.32 ಅಡಿ ಸಂಗ್ರಹವಾಗಿದೆ. ಅಂದರೆ 19.52 ಟಿಎಂಸಿ ಗರಿಷ್ಠ ಸಾಮರ್ಥ್ಯವಿದೆ.17.82 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಸುಮಾರು ಇನ್ನು ಒಂದು ಟಿಎಂಸಿ ನೀರು ಬಂದರೆ ಪೂರ್ಣವಾಗಿ ಭರ್ತಿಯಾಗಲಿದೆ. 5500ಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವಿದ್ದು, 4000 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. 124.80 ಅಡಿ ಗರಿಷ್ಠ ಸಾಮರ್ಥ್ಯವಿರುವ ಕೆಆರ್ಎಸ್ ಜಲಾಶಯಕ್ಕೆ 6 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಒಳಹರಿವಿದ್ದು 101 ಅಡಿಗೆ ತಲುಪಿದೆ. 49.452 ಅಡಿ ಟಿಎಂಸಿ ಗರಿಷ್ಠ ಸಾಮರ್ಥ್ಯ ಇರುವ ಈ ಜಲಾಶಯದಲ್ಲಿ ಇಂದು 23.523 ಟಿಎಂಸಿ ನೀರಿದೆ. ಇನ್ನು ಶೇ.50ರಷ್ಟು ನೀರು ಜಲಾಶಯಕ್ಕೆ ಇನ್ನೂ ಬಂದಿಲ್ಲ. ಕಬಿನಿ ಮತ್ತು ಕಾವೇರಿ ಜಲನಯನ ಭಾಗದಲ್ಲಿ ಮಳೆಯ ಪ್ರಮಾಣ ಏರಿಳಿತವಾದಂತೆ ಈ ಜಲಾಶಯಗಳಿಗೆ ಬರುವ ಒಳಹರಿವಿನಲ್ಲೂ ವ್ಯತ್ಯಾಸವಾಗುತ್ತಿದೆ. ಇನ್ನು ಮೂರ್ನಾಲ್ಕು ದಿನ ಉತ್ತಮ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಇನ್ನಷ್ಟು ನೀರು ಜಲಾಶಯಗಳಿಗೆ ಹರಿದುಬರಲಿದೆ.

Leave a Reply

Your email address will not be published. Required fields are marked *

error: Content is protected !!