ಉದಯವಾಹಿನಿ, ಬೆಂಗಳೂರು: ಹೆಚ್ಚುತ್ತಿರುವ ಅನಕ್ಷರತೆ, ಕುಟುಂಬ ಸದಸ್ಯರ ಒತ್ತಡ, ಏಕಪೋಷಕತ್ವ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ಗಂಡು ಸಂತಾನ ಬೇಕೆಂಬ ಹೆಬ್ಬಯಕೆ, ಪ್ರೇಮ ಪ್ರಕರಣ ಇತರೆ ಕಾರಣಗಳಿಂದ ರಾಜ್ಯದಲ್ಲಿ ಬಾಲ ಗರ್ಭಿಣಿ ಪ್ರಕರಣಗಳು ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ.ರಾಜ್ಯದಲ್ಲಿ ಒಟ್ಟು 13,447 ಬಾಲ ಗರ್ಭಿಣಿ ಪ್ರಕರಣ ದಾಖಲಾಗಿದ್ದು, ಸರ್ಕಾರ ಇಂತಹ ಅಮಾನುಷ ಪ್ರಕರಣಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಂತಾನೋತ್ಪತಿ ಮಕ್ಕಳ ಆರೋಗ್ಯ(ಆರ್ಸಿಎಚ್) ದತ್ತಾಂಶದ ವರದಿಯು ಹೇಳಿದೆ.
ದುರಂತವೆಂದರೆ ಅತಿಹೆಚ್ಚು ಸುಶಿಕ್ಷಿತರನ್ನು ಹೊಂದಿರುವ ರಾಜಧಾನಿ ಬೆಂಗಳೂರಿನಲ್ಲಿ ಅತಿಹೆಚ್ಚು (1344), ಬೆಳಗಾವಿ(986) ಹಾಗೂ 3ನೇ ಸ್ಥಾನದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು(943) ಬಾಲ ಗರ್ಭೀಣಿ ಪ್ರಕರಣಗಳು ದಾಖಲಾಗಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಒಟ್ಟು 13,447 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿದ್ದು, ಸರ್ಕಾರ ಗ್ರಾಮೀಣ ಮತ್ತು ನಗರಪ್ರದೇಶಗಳಲ್ಲಿ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಈ ವರದಿಯನ್ನು ಸ್ವೀಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಾಲಗರ್ಭಿಣಿ ಪ್ರಕರಣಗಳನ್ನು ತಡೆಗಟ್ಟಲು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಇದು ಮರುಕಳಿಸಿದರೆ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಸೂಚನೆ ಕೊಟ್ಟಿದ್ದಾರೆ.ರಾಜ್ಯದಲ್ಲಿ ಜ.1, 2022ರಿಂದ ಮಾರ್ಚ್ 31, 2023ರವರೆಗೆ 13,477 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ ಎಂದು ಸಂತಾನೋತ್ಪತ್ತಿ ಮಕ್ಕಳ ಆರೋಗ್ಯ ದತ್ತಾಂಶ ತಿಳಿಸಿದೆ.
