ಉದಯವಾಹಿನಿ, ಬೆಂಗಳೂರು: ಚಿನ್ನಾಭರಣ ಮಳಿಗೆಗೆ ಗ್ರಾಹಕರಂತೆ ಬುರುಕ ಧರಿಸಿಕೊಂಡು ಹೋಗಿ ಕೆಲಸಗಾರರ ಗಮನ ಸೆಳೆದು ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 4.75 ಲಕ್ಷ ರೂ. ಬೆಲೆಬಾಳುವ 78 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.ಕುಮಾರಸ್ವಾಮಿ ಲೇಔಟ್ ವ್ಯಾಪ್ತಿಯ ಚಿನ್ನಾಭರಣ ಮಳಿಗೆಯೊಂದಕ್ಕೆ ಬುರ್ಕಾ ಧರಿಸಿದ್ದ ಇಬ್ಬರು ಮಹಿಳೆಯರು ಆಭರಣ ಖರೀದಿಸುವ ಗ್ರಾಹಕರಂತೆ ಹೋಗಿದ್ದು, ಅಲ್ಲಿನ ಕೆಲಸಗಾರ ಆಭರಣ ತೋರಿಸುತ್ತಿದ್ದಾಗ ಅವರುಗಳ ಗಮನ ಸೆಳೆದು ಸರವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ ವಿಸ್ರೋ ಲೇಔಟ್‍ನ ದೇವರಕೆರೆ ಪಕ್ಕದ ಖಾಲಿ ಜಾಗದಲ್ಲಿ ಇಂಡಿಗೋ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಚಿನ್ನದ ಸರ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.
ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷನನ್ನು ಪೊಲೀಸ್ ಅಭಿರಕ್ಷೆಗೆ ಪಡೆಯಲಾಗಿದ್ದು, ಮತ್ತೊಬ್ಬ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಕಳವು ಮಾಡಿದ ಚಿನ್ನದ ಸರವನ್ನು ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿರುವ ಜ್ಯುವೆಲರಿ ವರ್ಕ್‍ಶಾಪ್‍ಗೆ ನೀಡಿದ್ದಾಗಿ ತಿಳಿಸಿದ ಮೇರೆಗೆ ಪೊಲೀಸರು ವರ್ಕ್‍ಶಾಪ್‍ನಿಂದ ಆಭರಣವನ್ನು ಜಪ್ತಿ ಮಾಡಿದ್ದಾರೆ. ಕುಮಾರಸ್ವಾಮಿ ಲೇಔಟ್ ಠಾಣೆ ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಬ್ರಮಣ್ಯಪುರ: ಪ್ಲಂಬರ್ ಎಂದು ಹೇಳಿಕೊಂಡು ಮನೆಯೊಂದಕ್ಕೆ ಹೋಗಿ ಮಹಿಳೆಗೆ ಪಿಸ್ತೂಲಿನ ಹಿಂಭಾಗದಿಂದ ತಲೆಗೆ ಹೊಡೆದು ಹೆದರಿಸಿ 73 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೃತ್ಯ ನಡೆಸಿ ಪರಾರಿಯಾಗುತ್ತಿದ್ದ ವೇಳೆ ತಕ್ಷಣ ಸಾರ್ವಜನಿಕರೊಬ್ಬರು 112ಗೆ ಕರೆ ಮಾಡಿ ಮಾಹಿತಿ ನೀಡಿದ ಮೇರೆಗೆ ಹೊಯ್ಸಳ ಸಿಬ್ಬಂದಿ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 5.50 ಲಕ್ಷ ರೂ. ಮೌಲ್ಯದ 73 ಗ್ರಾಂ ಚಿನ್ನದ ಮಾಂಗಲ್ಯ ಸರ ಕೃತ್ಯಕ್ಕೆ ಬಳಸಿದ ನಕಲಿ ಪಿಸ್ತೂಲ್ ಹಾಗೂ ಬಾಲ್ಸ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ಸ್‍ಪೆಕ್ಟರ್ ರಾಜು ನೇತೃತ್ವದ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿದ್ದರು.
