ಉದಯವಾಹಿನಿ, ಗದಗ: ಬೀಡಾಡಿ ದನವೊಂದು ತಿವಿದ ಪರಿಣಾಮ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಟಗೇರಿಯ ಹೊಸ ಬನಶಂಕರಿ ಗುಡಿ ಸಮೀಪ ಬುಧವಾರ ಬೆಳಿಗ್ಗೆ ನಡೆದಿದೆ.
ಬೆಟಗೇರಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಲಕ್ಷ್ಮೇಶ್ವರ ತಾಲ್ಲೂಕಿನ ಶಿಗ್ಲಿ ಗ್ರಾಮದ ಶಂಕರಪ್ಪ ಹೊಳೆ (70) ಮೃತಪಟ್ಟವರು.
ಬುಧವಾರ ಬೆಳಿಗ್ಗೆ 8ರ ಸುಮಾರಿಗೆ ಬೆಟಗೇರಿಯ ಸರ್ಕಾರಿ ಪ್ರಾಥಮಿಕ ಶಾಲೆ ನಂ.7ರ ಸಮೀಪ ಬೀಡಾಡಿ ದನಗಳು ಕಾದಾಡುತ್ತಿದ್ದವು. ಈ ವೇಳೆ ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಶಂಕಪ್ಪ ಹೊಳೆ ಅವರಿಗೆ ದನವೊಂದು ರಭಸದಿಂದ ತಿವಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು.

‘ಬೀಡಾಡಿ ದನ ಗುದ್ದಿ ತೀವ್ರ ಗಾಯಗೊಂಡಿದ್ದ ವೃದ್ಧನನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು 108 ಅಂಬುಲೆನ್ಸ್‌ಗೆ ಕರೆ ಮಾಡಿದ್ದರು. ಆದರೆ, ಅಂಬುಲೆನ್ಸ್‌ ಅರ್ಧ ಗಂಟೆಯಾದರೂ ಬರಲಿಲ್ಲ. ಸರಿಯಾದ ಸಮಯಕ್ಕೆ ಅಂಬುಲೆನ್ಸ್‌ ಬಂದಿದ್ದರೆ ವೃದ್ಧ ಬದುಕುತ್ತಿದ್ದ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
‘ಬೀಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮವಹಿಸುವಂತೆ ಗದಗ ಬೆಟಗೇರಿ ನಗರಸಭೆಗೆ ಈ ಹಿಂದೆ ಕೂಡ ಹಲವಾರು ಬಾರಿ ಮನವಿ ಮಾಡಲಾಗಿತ್ತು. ಆದರೆ, ಅವರ ನಿರ್ಲಕ್ಷ್ಯದಿಂದಾಗಿ ಇಂದು ವೃದ್ಧರೊಬ್ಬರು ಪ್ರಾಣ ಕಳೆದುಕೊಳ್ಳುವಂತಾಯಿತು’ ಎಂದು ಸ್ಥಳೀಯರು ಕಿಡಿಕಾರಿದರು.
ವೃದ್ಧನ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಅವಳಿ ನಗರದಲ್ಲಿರುವ ಎಲ್ಲ ಬೀಡಾಡಿ ದನಗಳನ್ನು ತಕ್ಷಣವೇ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!