ಉದಯವಾಹಿನಿ, ಮುಂಡರಗಿ: ‘ಗದಗ, ಮುಂಡರಗಿ ಮಾರ್ಗವಾಗಿ ಹರಪನಹಳ್ಳಿಗೆ ನೂತನ ರೈಲು ಮಾರ್ಗ ಮಂಜೂರಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆ.20ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯ ಸಂಚಾಲಕ ಬಸವರಾಜ ನವಲಗುಂದ ತಿಳಿಸಿದರು.
ಬೆಂಗಳೂರಿನಲ್ಲಿ ಹೋರಾಟ ಕೈಗೊಳ್ಳುವ ಕುರಿತು ಪಟ್ಟಣದ ಪುರಸಭೆ ಉದ್ಯಾನವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.’
ಈ ಭಾಗಕ್ಕೆ ನೂತನ ರೈಲು ಮಾರ್ಗ ಮಂಜೂರು ಮಾಡಬೇಕು ಎಂದು ಹಲವು ವರ್ಷಗಳಿಂದ ವಿವಿಧ ಸಂಘಟನೆಗಳ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ. ಆದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮೀನ ಮೇಷ ಎಣಿಸುತ್ತಿವೆ’ ಎಂದು ಆರೋಪಿಸಿದರು. ‘ಕೊಪ್ಪಳ, ಮುಂಡರಗಿ, ಶಿಗ್ಗಾಂವಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಅದನ್ನು ತಕ್ಷಣ ಆರಂಭಿಸಬೇಕು. ಪಟ್ಟಣದ ಬಡ ಹಾಗೂ ನಿರ್ಗತಿಕರಿಗೆ ವಾಸಿಸಲು ಮನೆಗಳಿಲ್ಲದೆ ಅವರೆಲ್ಲ ಪರದಾಡುತ್ತಿದ್ದಾರೆ. ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ಪಟ್ಟಣದ ಹೊರವಲಯದಲ್ಲಿ 25 ಎಕರೆ ಜಮೀನು ಖರೀದಿಸಲಾಗಿದ್ದು, ಅಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕು’ ಎಂದು ಒತ್ತಾಯಿಸಿದರು.’ಪಟ್ಟಣದ ಅಂಚೆ ಕಚೇರಿಯು ಇಕ್ಕಟ್ಟಾದ ಬಾಡಿಗೆ ಕಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ.
