ಉದಯವಾಹಿನಿ, ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ನಗರದ ಐಟಿಪಿಎಲ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಗೆ ಇಂದು ಬೆಳಿಗ್ಗೆ ಎನ್‌ಐಎ ಅಧಿಕಾರಿಗಳ ತಂಡ ಪ್ರಮುಖ ಆರೋಪಿ ಮುಸಾವಿರ್‌ನನ್ನು ಸ್ಥಳಕ್ಕೆ ಕರೆತಂದು ಅಂದಿನ ಘಟನೆಯನ್ನು ಮರುಸೃಷ್ಟಿಸಿ ಮಹಜರು ನಡೆಸಿದರು.ರಾಮೇಶ್ವರಂ ಕೆಫೆಯನ್ನು ಸ್ಫೋಟಿಸಲು ಮಾ.1ರಂದು ಆರೋಪಿ ಬಂದಿದ್ದ ರೀತಿಯಲ್ಲೇ ಇಂದು ಬೆಳಿಗ್ಗೆ ಕೆಫೆಗೆ ಟೋಫಿ ಧರಿಸಿ ಕೆಫೆಗೆ ಯಾವ ಮಾರ್ಗದಲ್ಲಿ ಬಂದ, ಎಷ್ಟು ನಿಮಿಷ ಕಫೆಯಲ್ಲಿ ಕುಳಿತಿದ್ದ, ಯಾವ ತಿಂಡಿ ಆರ್ಡರ್ ಮಾಡಿದ್ದ, ಕೆಫೆಯಲ್ಲಿ ಇದ್ದಷ್ಟು ಸಮಯ ಏನು ಮಾಡುತ್ತಿದ್ದ ನಂತರ ಹೊರಗೆ ಹೋಗುವಾಗ ತಾನು ತಂದಿದ್ದ ಸ್ಫೋಟಕಗಳಿದ್ದ ಬ್ಯಾಗನ್ನು ಯಾವ ಸ್ಥಳದಲ್ಲಿ ಇರಿಸಿದ್ದ ಎಂಬ ಅಂದಿನ ಘಟನಾವಳಿಗಳನ್ನು ಆರೋಪಿಯಿಂದಲೇ ಮರುಸೃಷ್ಠಿಸಿ ಎನ್‌ಐಎ ಅಧಿಕಾರಿಗಳು ಸ್ಥಳ ಮಹಜರು ನಡೆಸಿ ಹಲವು ಮಾಹಿತಿಗಳನ್ನು ಸಂಗ್ರಹಿಸಿದರು.
ಎನ್ಐಎ ಅಧಿಕಾರಿಗಳು 2-3 ಬಾರಿ ಅಂದಿನ ದೃಶ್ಯಗಳನ್ನು ಮರುಸೃಷ್ಠಿ ಮಾಡಿದ್ದಾರೆ. ಆರೋಪಿ ಮುಸಾವಿರ್ ಅಂದು ಹೇಗೆ ಕೆಫೆಗೆ ನಡೆದುಕೊಂಡು ಬಂದಿದ್ದನ್ನು ತೋರಿಸಿ ಅಧಿಕಾರಿಗಳಿಗೆ ವಿವರಣೆ ನೀಡಿದ್ದಾನೆ. ಬಾಂಬ್ ಇಟ್ಟಿದ್ದ ಸ್ಥಳ, ಕುಳಿತಿದ್ದ ಸ್ಥಳವನ್ನು ತೋರಿಸಿದ್ದಾನೆ. ಈ ಎಲ್ಲಾ ದೃಶ್ಯಾವಳಿಗಳನ್ನು ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಕೆಫೆ ಸುತ್ತಮುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ವೈಟ್ ಫೀಲ್ಡ್ ವಿಭಾಗದ 50ಕ್ಕೂ ಹೆಚ್ಚು ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಮಾ.1ರಂದು ನಡೆದಿದ್ದ ಕೆಫೆ ಸ್ಫೋಟದಲ್ಲಿ ಕೆಫೆ ಸಿಬ್ಬಂದಿ ಸೇರಿ 9 ಮಂದಿ ಗ್ರಾಹಕರು ಗಾಯಗೊಂಡಿದ್ದರು. ಅಂದಿನ ಘಟನೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು.
