ಉದಯವಾಹಿನಿ,  ಬೀದರ್: ರಾಜ್ಯ ಸರ್ಕಾರವನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅವರು ಅಸ್ಥಿರಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ಶೋಷಿತ ಸಮುದಾಯಗಳ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಪ್ರತಿಭಟನಾ ರ್ಯಾಲಿ, ರಸ್ತೆತಡೆ ನಡೆಸಲಾಯಿತು.
ನಗರದ ಬೊಮ್ಮಗೊಂಡೇಶ್ವರ ವೃತ್ತದಲ್ಲಿ ಸೇರಿದ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಶೋಷಿತ ಸಮುದಾಯಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಪ್ರಮುಖ ಮಾರ್ಗಗಳಲ್ಲಿ ???ಯಾಲಿ ನಡೆಸಿದರು.
ಮಾರ್ಗದುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ, ಕಾಂಗ್ರೆಸ್ ಸರ್ಕಾರ ಪರ ಹಾಗೂ ಜೈ ಸಂವಿಧಾನ, ಜೈ ಭೀಮ್ ಎಂದು ಘೋಷಣೆಗಳನ್ನು ಹಾಕಿದರು. ದಿಕ್ಕಾರ ದಿಕ್ಕಾರ ರಾಜ್ಯಪಾಲರಿಗೆ ದಿಕ್ಕಾರ, ಬಿಜೆಪಿ-ಜೆಡಿಎಸ್‍ನವರಿಗೆ ದಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. ತಮಟೆ ಬಾರಿಸಿ ಗಮನ ಸೆಳೆದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಕೆಲಕಾಲ ರಸ್ತೆತಡೆ ನಡೆಸಿದರು. ಇದರಿಂದ ಕೆಲಸಮಯ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ಸಾರ್ವಜನಿಕರು ಪರದಾಡಿದರು. ಆನಂತರ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ರಾಜ್ಯಪಾಲರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಬದಲು ಕಿರಿಯ ಅಧಿಕಾರಿಯನ್ನು ಮನವಿ ಪತ್ರ ಸ್ವೀಕರಿಸಲು ಬಂದಾಗ, ಒಕ್ಕೂಟದವರು ಜಿಲ್ಲಾಧಿಕಾರಿಯವರೇ ಬಂದು ತೆಗೆದುಕೊಳ್ಳಬೇಕು ಎಂದು ಪಟ್ಟು ಹಿಡಿದಾಗ, ಶಿಲ್ಪಾ ಅವರು ಬಂದು ಮನವಿ ಸ್ವೀಕರಿಸಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರು ಕೈ ಹಾಕಿದರೆ ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು. ರಾಜ್ಯದಲ್ಲಿ ಕೋಮುವಾದಿಗಳು, ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರದ ಆಸೆಗೆ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿವೆ. ಇದಕ್ಕಾಗಿ ಬಿಜೆಪಿ-ಜೆಡಿಎಸ್ ನಾಯಕರು ಸಿದ್ದರಾಮಯ್ಯನವರ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದ ಕುಮ್ಮಕ್ಕು ಕೂಡ ಇದ್ದು, ರಾಜ್ಯಪಾಲರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಒಕ್ಕೂಟದ ಮುಖಂಡರು ಆರೋಪಿಸಿದರು.
40 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಸಿದ್ದರಾಮಯ್ಯನವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಒಂದೇ ಒಂದೂ ಕಪ್ಪು ಚುಕ್ಕೆಯಿಲ್ಲದ ಅವರಿಗೆ ರಾಜಕೀಯವಾಗಿ ಕಪ್ಪು ಮಸಿ ಬಳಿಯಲು ಬಿಜೆಪಿ-ಜೆಡಿಎಸ್ ರಾಜ್ಯ ನಾಯಕರು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಇದಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಆರೋಪ ಮಾಡಿದರು.

 

Leave a Reply

Your email address will not be published. Required fields are marked *

error: Content is protected !!