ಉದಯವಾಹಿನಿ, ಬೆಂಗಳೂರು : ಬೆಂಗಳೂರು ನಗರದಲ್ಲಿ ಸುರಿದ ಮಳೆ ಭಾರಿ ಆವಾಂತರ ಸೃಷ್ಟಿಸಿದೆ. ಎರಡು ಸಾವುಗಳ ಸಹ ಸಂಭವಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಕೆಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ಮೂರು ನಾಲ್ಕು ದಿನ ಬೆಂಗಳೂರು ನಗರ ಮಳೆ ಬರಲಿದೆ. ಇನ್ನೊಂದು ವಾರದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪಾಲಿಕೆ ಕೇಂದ್ರ ಕಚೇರಿಯ ಅನೆಕ್ಸ್-3 ಕಟ್ಟಡದ 6ನೇ ಮಹಡಿಯಲ್ಲಿರುವ ಕೊಮ್ಯಾಂಡ್ ಕಂಟ್ರೋಲ್ ಸೆಂಟರ್ ಸೋಮವಾರ ಖುದ್ದು ಭೇಟಿ ನೀಡಿ ಪರಿಶೀಲಿಸಿದರು. ನಿರ್ವಹಣೆ ಕುರಿತು ಸಿಬ್ಬಂದಿ ಬಳಿ ಮಾಹಿತಿ ಪಡೆದರು.ಅಷ್ಟೇ ಅಲ್ಲದೇ ಮಳೆ ಹಾನಿ ಕುರಿತು ಯಾವುದೇ ದೂರುಗಳ ಮಾಹಿತಿ ಬಂದರೂ ಕೂಡಲೇ ಪರಿಶೀಲಿಸಿ ತ್ವರಿತಗತಿಯಲ್ಲಿ ಪರಿಹರಿಸಲು ಅವರು ಅಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ತಾವೇ ಖುದ್ದು ಸಹಾಯ ತಂತ್ರಾಂಶದ ಮುಖಾಂತರ ಬಂದಿರುವ ವಲಯವಾರು ಮಳೆಹಾನಿ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಿದರು. ಈ ಪೈಕಿ ಸಹಾಯ ತಂತ್ರಾಂಶದಲ್ಲಿ ಸುಮಾರು 70 ದೂರುಗಳು ಬಂದಿದ್ದು, ಮೂರು ದಿನಗಳೊಳಗಾಗಿ ದೂರುಗಳಿಗೆ ಪರಿಹಾರ ಕಲ್ಪಿಸುವಂತೆ ಹೇಳಿದರು.ಬಿಬಿಎಂಪಿ ಸೂಚನೆ ಉಲ್ಲಂಘಿಸಿದ್ದೇ ಆದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಶಿಸ್ತು ಕ್ರಮ ವಹಿಸುವುದಾಗಿ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದರು.ಮಳೆಗಾಲ ಹತ್ತಿರವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರು, ವಿಪತ್ತು ನಿರ್ವಹಣೆಗಾಗಿ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಹಾಗೂ ಪೊಲೀಸ್ ಇಲಾಖೆಯಿಂದ ನೋಡಲ್ ಅಧಿಕಾರಿಯನ್ನು ತಕ್ಷಣವೇ ನೇಮಿಸಲು ಸೂಚಿಸಿದರು. ಮಳೆ ಹಾನಿ ಸಂಬಂಧ ದೂರಿನ ಮಾಹಿತಿ ಹಾಗೂ ತೆಗೆದುಕೊಂಡಿರುವ ಮಾಹಿತಿಯನ್ನು ಅಧಿಕಾರಗಳು ನಮ್ಮ ಗಮನಕ್ಕೆ ತರಬೇಕು ಎಂದರು.
