ಉದಯವಾಹಿನಿ, ಸಿಂಧನೂರು: ನಗರದ ಗಂಗಾವತಿ-ರಾಯಚೂರು ಮುಖ್ಯ ರಸ್ತೆಯಿಂದ ರೈಲ್ವೆ ಸ್ಟೇಷನ್‍ಗೆ ಹೋಗುವ ರಸ್ತೆಯು ತೆಗ್ಗುದಿನ್ನೆಗಳಿಂದ ಕೂಡಿದ್ದು, ಮಳೆ ಬಂದರೆ ಸಾಕು ಕೆಸರುಗದ್ದೆಯಂತೆ ಆಗಿರುವುದರಿಂದ ಪ್ರಯಾಣಿಕರು, ವಾಹನ ಸವಾರರು ಸಂಚರಿಸಲು ಹೈರಾಣು ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಸಿಂಧನೂರಿಗೆ ರೈಲ್ವೆ ಸೌಕರ್ಯ ಭಾಗ್ಯ ಬಹುದಿನಗಳ ನಂತರ ಲಭಿಸಿದೆ. ಆದರೆ, ಸ್ಟೇಷನ್‍ಗೆ ಹೋಗುವ ಒಂದುವರೆ ಕಿಲೋ ಮೀಟರ್ ರಸ್ತೆ ಅತ್ಯಂತ ಕೆಟ್ಟ ರೀತಿಯಲ್ಲಿ ಹದಗೆಟ್ಟಿದ್ದು, ಸಾರ್ವಜನಿಕ ಸಂಚಾರ ಯಾತನಾಮಯವಾಗಿದೆ. ಈ ಮೊದಲು ತೆಗ್ಗುದಿನ್ನೆಗಳು ಇದ್ದುದರಿಂದ ಬೈಕ್, ಕಾರು, ಆಟೊ ಮತ್ತಿತರ ವಾಹನಗಳನ್ನು ಚಲಾಯಿಸಲು ಹರಸಾಹಸ ಪಡಬೇಕಾಗಿತ್ತು. ಈಗ ಮಳೆಯಾಗಿದ್ದು, ತೆಗ್ಗುಗಳಲ್ಲಿ ನೀರು ನಿಂತಿರುವುದರಿಂದ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸಿದೆ.
ಹುಬ್ಬಳ್ಳಿಯಿಂದ ಸಿಂಧನೂರಿಗೆ ಬರುವ ಪ್ರಯಾಣಿಕರು ರಾತ್ರಿ ಸಮಯದಲ್ಲಿ ರೈಲ್ವೆ ಸ್ಟೇಷನ್‍ನಲ್ಲಿ ಇಳಿದು ಮುಖ್ಯರಸ್ತೆಗೆ ಬರಬೇಕಾದರೆ ಅರ್ಧ ತಾಸಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ. ಕಪ್ಪು ಮಣ್ಣಿನ ರಸ್ತೆಯಾಗಿರುವುದರಿಂದ ಹಲವು ವಾಹನಗಳು ರಸ್ತೆಯಲ್ಲಿ ಸಿಕ್ಕು ಬೀಳುತ್ತಿವೆ. ದ್ವಿಚಕ್ರ ವಾಹನಗಳ ಸವಾರರಂತೂ ಈ ರಸ್ತೆಯಲ್ಲಿ ಬಿದ್ದು ಎದ್ದು ಹೋಗುವ ದುಸ್ಥಿತಿಯಿದೆ.
ರೈಲ್ವೆ ಸ್ಟೇಷನ್ ಉದ್ಘಾಟನೆಗೆ ಪೂರ್ವದಲ್ಲಿಯೇ ಕೂಡಲೇ ರಸ್ತೆಯನ್ನು ನಿರ್ಮಾಣ ಮಾಡುವಂತೆ ಆಗಿನ ಸಂಸದರಾಗಿದ್ದ ಕರಡಿ ಸಂಗಣ್ಣ ಮತ್ತು ಶಾಸಕ ಹಂಪನಗೌಡ ಬಾದರ್ಲಿ ಅವರು ಹೇಳಿದರೂ ಸಹ ಪ್ರತಿಫಲ ಮಾತ್ರ ಶೂನ್ಯವಾಗಿದೆ ಎಂದು ವರ್ತಕರ ಸಂಘದ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
‘ರಸ್ತೆ ದಯನೀಯ ಸ್ಥಿತಿಯಲ್ಲಿ ಹದಗೆಟ್ಟಿರುವುದರಿಂದ ರೈಲ್ವೆ ಮುಖಾಂತರ ಬೆಂಗಳೂರು ಮತ್ತು ಹುಬ್ಬಳ್ಳಿಗೆ ಹೋಗುವುದನ್ನೇ ಬಿಟ್ಟಿದ್ದೇವೆ’ ಎನ್ನುತ್ತಾರೆ ಗೌತಮ್ ಶೇಠ್. ರೈಲ್ವೆ ಸ್ಟೇಷನ್ ಪ್ರಾರಂಭವಾಗುವುದಕ್ಕಿಂತ ಪೂರ್ವದಲ್ಲಿಯೇ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಸಂಸದರಾಗಿ ಆಯ್ಕೆಯಾಗಿರುವ ರಾಜಶೇಖರ್ ಹಿಟ್ನಾಳ್ ಅವರು ರೈಲ್ವೆ ಪ್ರಯಾಣಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು’ ಎಂದು ಸಿಪಿಐಎಂಎಲ್ ಲಿಬರೇಶನ್ ಪಾರ್ಟಿಯ ಜಿಲ್ಲಾ ಘಟಕದ ಕಾರ್ಯದರ್ಶಿ ನಾಗರಾಜ್ ಪೂಜಾರ್ ಒತ್ತಾಯಿಸಿದ್ದಾರೆ.
