ಉದಯವಾಹಿನಿ, ಬೆಂಗಳೂರು : ಪಿಎಸ್‌‍ಐ 402 ಹುದ್ದೆಗಳ ನೇಮಕಾತಿಗೆ ಸೆ.22 ರ ಬದಲಾಗಿ ಸೆ.28 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 545 ಮೊದಲ ಹಂತದ ಪಿಎಸ್‌‍ಐ ಹುದ್ದೆಗಳ ನೇಮಕಾತಿಗೆ ಈಗಾಗಲೇ ಮರುಪರೀಕ್ಷೆ ನಡೆಸಿ ಅಂತಿಮ ಫಲಿತಾಂಶ ಪ್ರಕಟಿಸಿ ನೇಮಕಾತಿ ಆದೇಶ ನೀಡುವ ಹಂತದಲ್ಲಿದ್ದೇವೆ.

ಎರಡನೇ ಹಂತದಲ್ಲಿ 402 ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಸೆ.22 ಕ್ಕೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಬಹಳಷ್ಟು ಮಂದಿ ಅಭ್ಯರ್ಥಿಗಳು ಪರೀಕ್ಷಾ ದಿನಾಂಕವನ್ನು ಮುಂದೂಡುವಂತೆ ಮನವಿ ಮಾಡಿದ್ದರು.
ಯುಪಿಎಸ್‌‍ಸಿಗೆ ಸೆ.22 ರಂದೇ ಮುಖ್ಯ ಪರೀಕ್ಷೆ ನಡೆಯುತ್ತಿದೆ. ಈಗಾಗಲೇ ಪ್ರಿಲಿಮ್ಸೌನಲ್ಲಿ ಯಶಸ್ಸು ಗಳಿಸಿ ಮುಖ್ಯ ಪರೀಕ್ಷೆಗೆ ರಾಜ್ಯದಿಂದ 100 ಮಂದಿ ಆಯ್ಕೆಯಾಗಿದ್ದು, ಅವರಿಗೆ ಅವಕಾಶ ತಪ್ಪಿಹೋಗಲಿದೆ ಎಂದು ವಿವರಿಸಲಾಗಿತ್ತು. ಬಿಜೆಪಿಯ ಅಶ್ವತ್ಥನಾರಾಯಣ ಹಾಗೂ ಇತರ ನಾಯಕರು ಕೂಡ ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿದ್ದರು.

ನಾವು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜೊತೆ ಚರ್ಚೆ ನಡೆಸಿದಾಗ ಡಿಸೆಂಬರ್‌ವರೆಗೂ ಯಾವುದೇ ಸ್ಲಾಟ್‌ಗಳು ಖಾಲಿ ಇಲ್ಲ ಎಂದು ತಿಳಿಸಲಾಗಿತ್ತು. ಮತ್ತೆ ಹಿರಿಯ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಜೊತೆ ಚರ್ಚೆ ನಡೆಸಿದ್ದೇನೆ. ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆಯ ಸಹಕಾರ ಬೇಕಿದೆ. ಪ್ರತಿ ಭಾನುವಾರವೂ ಡಿಸೆಂಬರ್‌ವರೆಗೂ ಪರೀಕ್ಷೆಗಳು ನಿಗದಿಯಾಗಿವೆ ಎಂದು ವಿವರಿಸಿದರು.

 

Leave a Reply

Your email address will not be published. Required fields are marked *

error: Content is protected !!