ಉದಯವಾಹಿನಿ, ಬೆಂಗಳೂರು: ಹಿಂದಿ ದಿವಸ ಆಚರಣೆಯ ಹೆಸರಲ್ಲಿ ಅನ್ಯಭಾಷಿಕರ ಮೇಲೆ ಹಿಂದಿ ಹೇರುವ ಹುನ್ನಾರವನ್ನು ಕೇಂದ್ರ ಸರ್ಕಾ ನಡೆಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ವೇದಿಕೆಯ ಅಧ್ಯಕ್ಷ ಟಿ.ಎ.ನಾರಯಣಗೌಡ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನವನದ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಹಿಂದಿ ಏರಿಕೆಯ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು.
ಹಿಂದಿ ಹೇರಿಕೆ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತಿದ್ದು ಕೂಡಲೇ ಹಿಂದಿ ದಿವಸ್ ಆಚರಣೆಯನ್ನು ಕೇಂದ್ರ ಸರ್ಕಾರ ವಾಪಾಸು ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಭಾರತದಲ್ಲಿ ೨೨ ಆಡಾಳಿತಾತ್ಮಕ ಭಾಷೆಗಳಿವೆ, ಎಲ್ಲಾ ಭಾಷೆಗಳನ್ನು ತುಳಿತ್ತಕ್ಕೆ ಒಳಪಡಿಸಲು, ಕೇಂದ್ರ ಸರ್ಕಾರ ಹಿಂದಿ ಸಪ್ತಾಹ, ಹಿಂದಿ ದಿವಸ್ ಅನ್ನುವ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಪ್ರತಿಭಟನೆಯ ನೇತೃತ್ವವಹಿಸಿದ್ದ ನಾರಾಯಣಗೌಡ ದೂರಿದರು. ದೇಶದ ಹಲವು ಉದ್ಯೋಗಗಳ ಪರಿಕ್ಷೆಯಲ್ಲಿ ಹಿಂದಿಯನ್ನು ಬಲವಂತವಾಗಿ ಹೇರಿದ್ದಾರೆ. ಈಗ ಹಿಂದಿ ದಿವಸ್ ಮೂಲಕ ನಮ್ಮ ಮೇಲೆ ಹೇರಿಕೆ ನಡೆಸುತ್ತಿದ್ದಾರೆ. ಬಲವಂತವಾಗಿ ಹೇರಿಕೆ ಮಾಡುವ ಮೂಲಕ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದೀರಾ. ಹೀಗಾಗಿ ಇಂದು ಹಿಂದಿ ಕಾರ್ಯಕ್ರಮವನ್ನು ಧಿಕ್ಕರಿಸಿ ನಾವು ಕಪ್ಪು ದಿನವನ್ನಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಾದ್ಯಂತ ಹಿಂದಿ ದಿವಸ್, ಹಿಂದಿ ಸಪ್ತಾಹ ಆಚರಿಸಲು ಹೊರಟಿದೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎನ್ನುವ ಅರಿವೇ ಇಲ್ಲ. ಕೋಟಿ ಕೋಟಿ ಖರ್ಚು ಮಾಡಿ ಹಿಂದಿಯನ್ನು ವೈಭವೀಕರಿಸಲಾಗುತ್ತಿದೆ. ದೇಶದಲ್ಲಿ ಅಧಿಕೃತ ರಾಷ್ಟ್ರ ಭಾಷೆ ಯಾವುದೂ ಇಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ ಎಂದು ತಿಳಿಸಿದರು. ಪ್ರಾದೇಶಿಕ ಭಾಷೆಗಳನ್ನು ಮುಗಿಸಲು ಹುನ್ನಾರ ಮಾಡಿದ್ದಾರೆ. ಒಕ್ಕೂಟ, ಅಖಂಡ ಭಾರತ ಉಳಿಯಬೇಕಾದರೆ ಎಲ್ಲಾ ಭಾಷೆ , ಆಚಾರ ವಿಚಾರ ಉಳಿಯಬೇಕು. ಕೆಲವು ರಾಜ್ಯಗಳಲ್ಲಿ ಹಿಂದಿ ಭಾಷಿಕರ ಸಂಖ್ಯೆ ಜಾಸ್ತಿ ಇದೆ ಎಂಬ ಮಾತ್ರಕ್ಕೆ ಘೋಷಣೆ ಸರಿಯಲ್ಲ. ಇದು ಭಾರತ ಒಕ್ಕೂಟಕ್ಕೆ ಧಕ್ಕೆ ತರುತ್ತದೆ. ಬಾಂಗ್ಲಾದೇಶ, ಪಾಕಿಸ್ತಾನ ಭಾಷೆಯಿಂದಲೇ ವಿಭಜನೆ ಆಯ್ತು, ಇದನ್ನ ಮರೆಯಬಾರದು, ಎಂದು ಎಚ್ಚರಿಕೆ ನೀಡಿದರು.
