ಉದಯವಾಹಿನಿ, ರಾಮನಗರ: ‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ನನಗೇ ಟಿಕೆಟ್ ಸಿಗಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಕ್ಷೇತ್ರ ಭೇಟಿ ಆರಂಭಿಸಿದ್ದೇನೆ. ಟಿಕೆಟ್‌ಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್‌ ಮಧ್ಯೆ ಗೊಂದಲವಿಲ್ಲ. ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ವದಂತಿಗಳಿಗೆ ಉತ್ತರ ಸಿಗಲಿದೆ’ ಎಂದು ಟಿಕೆಟ್ ಆಕಾಂಕ್ಷಿಯಾಗಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದರು. ನಗರದ ಜಿಲ್ಲಾ ಪಂಚಾಯಿತಿ ಭವನದಲ್ಲಿ ಭಾನುವಾರ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಸದ ಡಾ. ಸಿ.ಎನ್. ಮಂಜುನಾಥ್ ದಂಪತಿ ಸಹ ನನ್ನ ಪರವಾಗಿದ್ದು, ಅವರ ಆಶೀರ್ವಾದ ಸದಾ ಇರಲಿದೆ’ ಎಂದರು.

‘ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಮುಖರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಮುಂದೆ ಹಳ್ಳಿಗಳಿಗೂ ಭೇಟಿ ನೀಡಿ, ಎನ್‌ಡಿಎ ಅಭ್ಯರ್ಥಿಯಾಗಿ ಬರುವ ನನಗೆ ಆಶೀರ್ವಾದ ಮಾಡಿ ಎಂದು ಕೇಳುತ್ತೇನೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಆಪರೇಷನ್ ಹಸ್ತ ನಡೆಸಿದರೂ ಅದರ ಪರಿಣಾಮ ಉಪ ಚುನಾವಣೆ ಮೇಲೆ ಬೀರುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದುಡ್ಡು ಕೊಟ್ಟು ನಗರಸಭೆ ಸದಸ್ಯರು ಸೇರಿದಂತೆ ಕೆಲ ಮುಖಂಡರನ್ನು ಕಾಂಗ್ರೆಸ್‌ನವರು ಸೆಳೆದಿದ್ದರು. ಈಗ ಅವರೆಲ್ಲರೂ ಮಾನಸಿಕವಾಗಿ ನಮಗೆ ಬೆಂಬಲ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ನಾನು ಮತ್ತು ನಿಖಿಲ್ ಪ್ರತ್ಯೇಕವಾಗಿ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತಾ, ಪಕ್ಷ ಸಂಘಟನೆ ಮಾಡಿ ಚುನಾವಣೆಗೆ ಅಣಿಗೊಳಿಸುತ್ತಿದ್ದೇವೆ’ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!