ಉದಯವಾಹಿನಿ, ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಶ್ರೀ ಬಂಡೆ ರಂಗನಾಥ ದೇವಸ್ಥಾನ ಬಳಿ ಇರುವ ತುಂಗಭದ್ರ ನದಿ ಹಿನ್ನೀರಿಗೆ ಶಾಸಕ ಕೆ ನೇಮಿರಾಜ್ ನಾಯ್ಕ್ ಭಾನುವಾರ ಬಾಗಿನ ಅರ್ಪಿಸಿದರು.
ನಂತರ ಬಂಡೆ ರಂಗನಾಥ ದೇವಸ್ಥಾನದ ಆವರಣದಲ್ಲಿ ರೈತರೊಂದಿಗೆ ಸಮಸ್ಯೆಗಳ ಬಗ್ಗೆ ಆಲಿಸಿ ಮಾತನಾಡಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿದ್ದು. ಮುಂದಿನ ದಿನಗಳಲ್ಲಿ ಕೆಕೆಆರ್ ಡಿ ಬಿ, ಡಿಎಂಎಫ್ ಹಾಗೂ ಕೆಎಂಇಆರ್ ಸಿ ಯೋಜನೆಗಳ ಅನುದಾನದಡಿ ಕ್ಷೇತ್ರದಲ್ಲಿ ಸಂಪೂರ್ಣ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿ ಮಾಡಲಾಗುವುದು. ರಾಜ್ಯ ಸರ್ಕಾರದ ಅನುದಾನದ ಕೊರತೆಯಿಂದ ಕೇಂದ್ರ ಸರ್ಕಾರದ ನಿಧಿ ಬಳಸಿಕೊಂಡು ಅಭಿವೃದ್ಧಿ ಕೆಲಸಕ್ಕೆ ಮುಂದಾಗುವೆ. ಕ್ಷೇತ್ರದ ಚೆಕ್ ಡ್ಯಾಂ, ಕೆರೆಗಳು ಅಭಿವೃದ್ಧಿಗೆ 60 ಕೋಟಿ ರೂ. ಅನುದಾನ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ರೈತ ಮುಖಂಡ ಚಂದ್ರಶೇಖರ್ ಪಾಟೀಲ್ ಮಾತನಾಡಿ ತೆಲುಗೋಳಿ ಸೇರಿದಂತೆ ವಿಭಾಗದಲ್ಲಿ ವಿದ್ಯುತ್ ಕೊರತೆಯಾಗುತ್ತಿದ್ದು ಕೂಡಲೇ ಸಬ್ ಸ್ಟೇಷನ್ ಸ್ಥಾಪಿಸುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಸಿದ ಶಾಸಕರು ಯೋಜನೆ ಜಾರಿಯಲ್ಲಿದ್ದು ಟೆಂಡರ್ ಕರೆಯಲಾಗಿದೆ ಎಂದರು.
ಈ ವರ್ಷ ಉತ್ತಮ ಮಳೆಯಾಗಿದ್ದು ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ತಂಬ್ರಹಳ್ಳಿ ಸೇರಿದಂತೆ ಬಹುತೇಕ ಗ್ರಾಮಗಳು ಯಥಾ ನೀರಾವರಿ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
