ಉದಯವಾಹಿನಿ, ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆ ಕರ್ನಾಟಕದಲ್ಲಿಯೇ ಕುತೂಹಲದ ಕಣವಾಗಿ ಮಾರ್ಪಡುತ್ತಿದೆ. ಒಂದೆಡೆ ಕಾಂಗ್ರೆಸ್ನಿಂದ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಕಾಳಜಿ ವಹಿಸಿದ್ದರೆ, ಇತ್ತ ಕ್ಷೇತ್ರವನ್ನು ತಮ್ಮ ಹಿಡಿತದಿಂದ ಬಿಟ್ಟುಕೊಡದೇ ಇರಬೇಕೆಂಬುದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಆಶಯ. ಆದರೆ, ಅತ್ತ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಬಿಜೆಪಿ ಟಿಕೆಟ್ಗೆ ಪಟ್ಟು ಹಿಡಿದಿದ್ದು, ತೆರೆಯ ಮರೆಯಿಂದ ಕಸರತ್ತು ನಡೆಸುತ್ತಿದ್ದಾರೆ. ಪ್ರಚಾರ ಕಾರ್ಯವನ್ನೂ ಶುರು ಮಾಡಿದ್ದಾರೆ. ಇದು ಎನ್ಡಿಎ ಮೈತ್ರಿಕೂಟದಲ್ಲಿ ಟಿಕೆಟ್ ಪೈಪೋಟಿ ಹೆಚ್ಚಿಸಿದೆ.
ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ತಲೆನೋವಾಗಿ ಪರಿಣಮಿಸಿರುವ ಬೆನ್ನಲ್ಲೇ ಹೆಚ್ಡಿ ಕುಮಾರಸ್ವಾಮಿ ಮತ್ತೊಂದು ತಂತ್ರದ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ಬಿಜೆಪಿ ಎಂಎಲ್ಸಿ ಸಿಪಿ ಯೋಗೇಶ್ವರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಜೆಡಿಎಸ್ ಅಭ್ಯರ್ಥಿಯನ್ನು ಅಂತಿಮಗೊಳಿಸುವುದು ಕುಮಾರಸ್ವಾಮಿ ಲೆಕ್ಕಾಚಾರವಾಗಿದೆ.
