ಉದಯವಾಹಿನಿ, ಚಿಕ್ಕಮಗಳೂರು: ಗೃಹಲಕ್ಷಿ ಯೋಜನೆಗೆ ಹಣ ಹೊಂದಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವ ಹುನ್ನಾರ ನಡೆಸಿದ್ದು, ಬಿಜೆಪಿ ಕಾರ್ಯಕರ್ತರು ಇದನ್ನು ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಕರೆ ನೀಡಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಸಂಬಂಧ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 50,000 ಬಿಪಿಎಲ್ ಕಾರ್ಡುಗಳು ರದ್ದಾಗುವ ಸಾಧ್ಯತೆಗಳಿವೆ. ಈ ಸಂಬಂಧ ರಾಜ್ಯ ಸರ್ಕಾರ ಸಮೀಕ್ಷೆ ಸಹ ನಡೆಸುತ್ತಿದೆ ಎಂದರು.
ಸಾವಿರಾರು ಬಡ ಜನರಿಗೆ ತೊಂದರೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮಹಿಳಾ ಮೋರ್ಚ ಅಥವಾ ಬೇರೆ ಯಾವುದಾದರೂ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಬಡವರ ಪಡಿತರ ಚೀಟಿಗಳನ್ನು ರದ್ದುಪಡಿಸಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಬೇಕು ಎಂದು ಹೇಳಿದರು.
ಇದರಿಂದ ಕನಿಷ್ಠಪಕ್ಷ ಬಿಪಿಎಲ್ ಕಾರ್ಡುಗಳಿಗೆ ಸ್ವಲ್ಪಮಟ್ಟಿನ ರಿಯಾಯಿತಿಯಾದರೂ ಸಿಗಬಹುದು. ಬಡವರಿಗೆ ಅನುಕೂಲವಾಗಬಹುದು ಎಂದರು. ಇಡೀ ದೇಶದಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ನಮ ನಮ ಬೂತ್ ಗಳಲ್ಲಿ ಅಭಿಯಾನಕ್ಕೆ ವೇಗ ನೀಡಬೇಕು. ಕೆಲವೆಡೆ ತುಂಬಾ ಚೆನ್ನಾಗಿ ನಡೆದಿದೆ. ಪ್ರಮುಖವಾಗಿ ಮಹಾಶಕ್ತಿ ಕೇಂದ್ರಗಳು, ಮಂಡಲಗಳಲ್ಲಿ ಇನ್ನಷ್ಟು ಚುರುಕಾಗಿ ಸದಸ್ಯತ್ವ ಅಭಿಯಾನ ನಡೆಯಬೇಕಿದೆ ಎಂದು ಕರೆ ನೀಡಿದರು.
