ಉದಯವಾಹಿನಿ, ಮಂಗಳೂರು: ‘ಕಕ್ಕೆಯಾವೊಡು ಯಾನ್, ಕಕ್ಕೆ ಆವೊಡು; ಕಪ್ಪು ಕಪ್ಪು ಆಂಡ ದಾನೆ, ಸ್ವರ ಕರಕರ ಆಂಡ ದಾನೆ…’ ಉಪನ್ಯಾಸಕ ರಘು ಇಡ್ಕಿದು ಅವರ ತುಳು ಕವನದ ಸಾಲುಗಳು ಹೀಗೆ ಸಾಗುತ್ತಿದ್ದಾಗ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆವರಣದಲ್ಲಿ ಸೇರಿದ್ದ ಸಹೃದಯರು ಚಿಂತನಾಮಗ್ನರಾದರು.
ನಗರದ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನವು ದಸರಾ ಅಂಗವಾಗಿ ಅಮೃತ ಸೋಮೇಶ್ವರ ಅವರ ನೆನಪಿನಲ್ಲಿ ಶುಕ್ರವಾರ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ಪ್ರಸ್ತುತಗೊಂಡ ‘ಕಕ್ಕೆ’ ಕವಿತೆ ‘ನಾನು ಕಾಗೆಯಂತಾಗಬೇಕು’ ಎಂಬ ಆಶಯವನ್ನು ಹೊಂದಿತ್ತು.
‘ಕ‍ಪ್ಪು ಕ‍ಪ‍್ಪು ಆಂಡ ದಾನೆ, ಸ್ವರ ಕರಕರ ಆಂಡ ದಾನೆ; ಮಾತೆರೆನ್ಲಾ ಗೂಟುಪಾಡ್ದ್‌ ಕೂಡ್ದು ತಿನ್ಪಿ ಮಲ್ಲ ಮನಸ್ಸುಂಡತ್ತ…’ (ಕಪ್ಪಿದ್ದರೇನಂತೆ, ಧ್ವನಿ ಕರ್ಕಶವಾಗಿದರೆ ಏನಾಯಿತಂತೆ, ಎಲ್ಲರನ್ನೂ ಜೊತೆಗೂಡಿಸಿ ಕಲೆತು ತಿನ್ನುವ ಗುಣವಿದೆಯಲ್ಲ, ಇನ್ನೇನು ಬೇಕು ಎಂದು ಕವಿತೆ ಸಾಗಿತು.
ವಿಜಯ ಶೆಟ್ಟಿ ಸಾಲೆತ್ತೂರು ಸೂರ್ಯೋದಯವನ್ನು, ಸುಧಾ ನಾಗೇಶ್ ತುಳು ಭಾಷೆಯನ್ನು, ಅಕ್ಷಯಾ ಆರ್.ಶೆಟ್ಟಿ ತಾಯಿಯ ವಾತ್ಸಲ್ಯವನ್ನು, ಅಕ್ಷತಾರಾಜ್ ಪೆರ್ಲ ತುಳು ಮಣ್ಣಿನ ಗುಣವನ್ನು, ‌ವಿಶ್ವನಾಥ್ ಕುಲಾಲ್ ಎಲ್ಲ ಕಡೆ ಸಲ್ಲುವ ಹಣವನ್ನು ಚಿತ್ರಿಸಿದರು. ಬಣ್ಣಿಸಿದರೆ ವಿಜಯಲಕ್ಷ್ಮಿ ಕಟೀಲು ಹೃದಯದಲ್ಲಿ ಹುದುಗಿರುವ ಸಣ್ಣ ಅಳುಕಿನ ಬಗ್ಗೆ ಹೇಳಿದರು. ವಸಂತ ಕುಮಾರ್ ಪೆರ್ಲ ಅಧ್ಯಕ್ಷತೆ ವಹಿಸಿದ್ದರು.
ಬಹುಭಾಷಾ ಕವಿಗೋಷ್ಠಿಯಲ್ಲಿ ಬದ್ರುದ್ದೀನ್ ಕೂಳೂರು, ಹಸನ್ ಕುಂಜತ್ತಬೈಲ್, ಕರುಣಾಕರ ಬಳ್ಕೂರು, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ರೇಮಂಡ್ ಡಿಕುನ್ನಾ, ಅರುಣ್ ಶೇಟ್‌, ಅರವಿಂದ ಬಾಳೇರಿ ಭಾಗವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಮೀನಾಕ್ಷಿ ರಾಮಚಂದ್ರ ಮಲಯಾಳಂ ಕವಿತೆ ವಾಚಿಸಿದರು. ಕುದ್ರೋಳಿ ಕ್ಷೇತ್ರದ ಖಜಾಂಚಿ ಪದ್ಮರಾಜ್ ಆರ್‌, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಲಾ ಶೆಟ್ಟಿ, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಸದಸ್ಯ ಶಶಿರಾಜ್ ಕಾವೂರು, ಸಂಶೋಧಕ ಚೇತನ್ ಸೋಮೇಶ್ವರ ಇದ್ದರು.

Leave a Reply

Your email address will not be published. Required fields are marked *

error: Content is protected !!