ಉದಯವಾಹಿನಿ, ಬೆಂಗಳೂರು: ಅಕಾಲಿಕ ಮಳೆಯಿಂದಾಗಿ ಟೊಮೆಟೊ ಬೆಳೆಗೆ ಭಾರೀ ಹಾನಿಯಾಗಿದ್ದು, ಹೀಗಾಗಿ ಮಾರುಕಟ್ಟೆಗೆ ಟೊಮೆಟೋ ಪೂರೈಕೆಯೂ ಕಮ್ಮಿಯಾಗಿದೆ. ಇದರಿಂದ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಟೊಮೆಟೋ ಬೆಲೆ ಏರಿಕೆಯಾಗಿದೆ.ಮಾರುಕಟ್ಟೆಗೆ ಟೊಮೆಟೋ ಬೇಡಿಕೆ ಜಾಸ್ತಿಯಾಗಿದ್ದು, ಪೂರೈಕೆ ಕಮಿಯಾಗಿದೆ.
ಟೊಮೆಟೋ ಬೆಲೆ ಕೆಲವು ರಾಜ್ಯಗಳಲ್ಲಿ ಕೆಜಿಗೆ 100 ರೂ.ವರೆಗೆ ತಲುಪಿದೆ. ಹೀಗಾಗಿ ನಿರಂತರವಾಗಿ ಏರುತ್ತಿರುವ ಬೆಲೆಯನ್ನು ನಿಯಂತ್ರಿಸಲು ಸರ್ಕಾರವು ಟೊಮೆಟೋ ದರ ಕೆಜಿಗೆ 65 ರೂ.ಗೆ ಮಾರಾಟ ಮಾಡಲು ನಿರ್ಧರಿಸಿದೆ.
ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನ್ಯಾಷನಲ್‌ ಕೋಆಪರೇಟಿವ್‌ ಕನ್ಸ್ಯೂಮರ್ಸ್‌ ಫೆಡರೇಶನ್‌ ಆಫ್‌ ಇಂಡಿಯಾ (ಎನ್‌ಸಿಸಿಎಫ್‌), ಎನ್‌ಎಎಫ್‌ಇಡಿ ಮತ್ತು ಸಫಲ್‌ ಚಿಲ್ಲರೆ ಮಳಿಗೆಗಳ ಮೂಲಕ ಕೆಜಿ ಟೊಮೆಟೋ 65 ರೂ.ಗೆ ಮಾರಾಟ ಮಾಡಲಾಗುತ್ತದೆ. ಇದಲ್ಲದೇ ಮೊಬೈಲ್‌ ವ್ಯಾನ್‌ಗಳ ಮೂಲಕವೂ ಟೊಮೆಟೋ ಮಾರಾಟ ಮಾಡಲಾಗುತ್ತದೆ.
ಸರ್ಕಾರದ ಪ್ರಕಾರ, ಅಕ್ಟೋಬರ್‌ನಲ್ಲಿ ಟೊಮೆಟೋ ಬೆಲೆ ಶೇ.39ರಷ್ಟು ಹೆಚ್ಚಾಗಿದೆ. ಕಳೆದ ತಿಂಗಳು ಕೆಜಿಗೆ ಸರಾಸರಿ 44 ರೂ.ನಿಂದ 62 ರೂ.ಗೆ ಏರಿಕೆಯಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಸಗಟು ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಕ್ವಿಂಟಲ್‌ಗೆ 3562 ರೂ.ನಿಂದ 5045 ರೂ.ಗೆ ಏರಿಕೆಯಾಗಿದೆ.
ರೇಟಿಂಗ್‌ ಏಜೆನ್ಸಿ ಕ್ರಿಸಿಲ್‌ನ ಇತ್ತೀಚಿನ ವರದಿಯ ಪ್ರಕಾರ, ವೆಜ್‌ ಥಾಲಿ ಬೆಲೆಯಲ್ಲಿ ಭಾರಿ ಜಿಗಿತ ಕಂಡುಬಂದಿದೆ. ಶೇ.11ರಷ್ಟು ತರಕಾರಿ ಥಾಲಿಯ ಬೆಲೆ ಏರಿಕೆಯಾಗಿದೆ. ಇದಕ್ಕೆ ಕಾರಣ ತರಕಾರಿಗಳ ಬೆಲೆ ಏರಿಕೆ. ಆದರೆ, ಮಾಂಸಾಹಾರಿ ಥಾಲಿಯ ದರ ಶೇ.2ರಷ್ಟು ಕಡಿಮೆಯಾಗಿದೆ. ಈ ಹಿಂದೆಯೂ ಟೊಮೆಟೋ ಬೆಲೆ ಹೆಚ್ಚಾದಾಗ ಸರ್ಕಾರ ಇದೇ ರೀತಿ ಮಾರಾಟ ಆರಂಭಿಸಿತ್ತು.

 

Leave a Reply

Your email address will not be published. Required fields are marked *

error: Content is protected !!