ಉದಯವಾಹಿನಿ, ಲಕ್ನೋ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯನ್ನು ಚಿರತೆ ಎಳೆದೊಯ್ದು ಕೊಂದಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ. ತಾನ್ಯಾ ತನ್ನ ಹೆತ್ತವರೊಂದಿಗೆ ಭತ್ತ ಕೊಯ್ಲಿನಲ್ಲಿ ಸಹಾಯ ಮಾಡಲೆಂದು ಹೊಲಕ್ಕೆ ಹೋಗಿದ್ದಾಗ, ಹೊಂಚು ಹಾಕಿ ಕೂತಿದ್ದ ಚಿರತೆ ಆಕೆಯನ್ನು ಎಳೆದೊಯ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆ ಪೋಷಕರೊಂದಿಗೆ ಹೊಲದಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದೆ. ಏಕಾಏಕಿ ದಾಳಿ ನಡೆಸಿದ ಚಿರತೆ ಸಮೀಪದ ಪ್ರದೇಶದಿಂದ ಹೊರಬಂದು ತಾನ್ಯಾಳ ಕುತ್ತಿಗೆಯನ್ನು ಹಿಡಿದುಕೊಂಡು ಪರಾರಿಯಾಗಿದೆ. ಕೂಡಲೇ ಮನೆಯವರು ಚಿರತೆಯನ್ನು ಅಟ್ಟಿಸಿಕೊಂಡು ಹೋಗಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಹತ್ತಿರದ ಕಬ್ಬಿನ ಗದ್ದೆ ಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದವರು ಕೂಡ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.
ಚಿರತೆಯ ಗಮನವನ್ನು ಬೇರೆಡೆಗೆ ಸೆಳೆದು ತಾನ್ಯಾಳನ್ನು ಹೇಗೋ ಎಳೆದುಕೊಂಡಿದ್ದಾರೆ. ಕೂಡಲೇ ಆಕೆಯನ್ನು ಸಮುದಾಯ ಕೇಂದ್ರಕ್ಕೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಆಕೆ ಗ್ರಾಮದ ಕೌನ್ಸಿಲ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.
