ಉದಯವಾಹಿನಿ, ಮಂಗಳೂರು: ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಾಲಯದ ಆಚಾರ್ಯ ಮಠ ವಠಾರದಲ್ಲಿ 102ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಅಂಗವಾಗಿ ಪೂಜೆಗೊಂಡ ಶ್ರೀಶಾರದಾ ಮಾತೆಯ ಶೋಭಾಯಾತ್ರೆ ಸೋಮವಾರ ವಿಜೃಂಭಣೆಯಿಂದ ನೆರವೇರಿತು.

ಅ.9 ರಿಂದ ಐದು ದಿನಗಳ ಕಾಲ ಪೂಜೆಗೊಂಡ ಶ್ರೀ ಶಾರದಾ ಮಾತೆಯ ದರ್ಶನಕ್ಕೆ ಚಿತ್ರಾಪುರ ಮಠ ಸಂಸ್ಥಾನದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಚಿತ್ತೈಸಿದ್ದರು.ಶ್ರೀವೆಂಕಟರಮಣ ದೇವಸ್ಠಾನದ ಆಡಳಿತ ಮಂಡಳಿ ಮತ್ತು ಶ್ರೀ ಶಾರದಾ ಮಹೋತ್ಸವ ಸಮಿತಿಯಿಂದ ಶ್ರೀಗಳಿಗೆ ದೇವಸ್ಥಾನದಲ್ಲಿ ಭವ್ಯ ಸ್ವಾಗತ ಕೋರಿದರು. ಶ್ರೀ ವೆಂಕಟರಮಣ ದೇವರ ದರ್ಶನದ ಬಳಿಕ ವಸಂತ ಮಂಟಪಕ್ಕೆ ತೆರಳಿದ ಸ್ವಾಮೀಜಿ, ಅಲ್ಲಿ ಪೂರ್ಣಾಲಂಕಾರದಿಂದ ಶೋಭಿಸುತ್ತಿದ್ದ ಶ್ರೀ ಶಾರದಾ ಮಾತೆಗೆ ಮಹಾ ಮಂಗಳಾರತಿ ನೆರವೇರಿಸಿದರು. ಬಳಿಕ ಶಾರದೆಯನ್ನು ಶ್ರೀವೆಂಕಟರಮಣ ದೇವಸ್ಥಾನಕ್ಕೆ ಕರೆತಂದು ದೇವರ ದರ್ಶನ ಮಾಡಿಸಲಾಯಿತು. ನಂತರ ಶಾರದಾ ಮಾತೆಯ ವಿಸರ್ಜನೆಯ ಶೋಭಾಯಾತ್ರೆ ಆರಂಭವಾಯಿತು. ಶೋಭಾಯಾತ್ರೆಯ ವೈಭವವನ್ನು ಸ್ವಾಮೀಜಿ, ಸರಸ್ವತಿ ಕಲಾಮಂಟಪದಲ್ಲಿ ವೀಕ್ಷಿಸಿದರು.

ಶೋಭಾಯಾತ್ರೆಯಲ್ಲಿ ಸಾಗಿಬಂದ ಶ್ರೀ ಶಾರದಾ ಮಾತೆಯ ಮನಮೋಹಕ ರೂಪವನ್ನು ಕಣ್ತುಂಬಿಕೊಳ್ಳಲು ಭಕ್ತರು ನಿದ್ದೆ ಬಿಟ್ಟು ಕಾದಿದ್ದರು. 14 ಹುಲಿವೇಷ ತಂಡಗಳು ಶೋಭಾಯಾತ್ರೆಯ ವಿಶೇಷ ಆಕರ್ಷಣೆಯಾಗಿದ್ದವು. ಹುಲಿ ಕುಣಿತ ದ ವೈಭವಕ್ಕೆ ಮನಸೋತ ಭಕ್ತರು ತಾಸೆಯ ಪೆಟ್ಟಿನ ಲಯಕ್ಕೆ ತಾವೂ ಹೆಜ್ಜೆ ಹಾಕಿದರು. ಮನ ಸೆಳೆಯುವ ಟ್ಯಾಬ್ಲೊಗಳು ಶೋಭಾಯಾತ್ರೆಗೆ ಮೆರುಗು ತುಂಬಿದವು.

ಉತ್ಸವ ಸ್ಥಾನದಿಂದ ಹೊರಟ ಮರವಣಿಗೆ ಶ್ರೀಮಹಾಮಾಯ ದೇವಾಲಯ- ಕೆನರಾ ಪ್ರೌಢಶಾಲೆಯ ಹಿಂಭಾಗದ ಮಾರ್ಗವಾಗಿ ರಾಷ್ಟ್ರಕವಿ ಗೋವಿಂದ ಪೈ ವೃತ್ತವನ್ನು ತಲುಪಿತು. ಅಲ್ಲಿಂದ ಡೊಂಗರಕೇರಿ ಮಾರ್ಗವಾಗಿ ನ್ಯೂಚಿತ್ರಾ – ಬಸವನಗುಡಿ-ಚಾಮರಗಲ್ಲಿ ಮಾರ್ಗವಾಗಿ ರಥ ಬೀದಿಗೆ ಮರಳಲಿದೆ. ಶ್ರೀಮಹಾಮಾಯಿ ತೀರ್ಥದಲ್ಲಿ ಶಾರದಾ ಮಾತೆಯ ವಿಗ್ರಹದ ಜಲಸ್ತಂಬನಗೊಳಿಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!