ಉದಯವಾಹಿನಿ, ಚನ್ನಪಟ್ಟಣ : ತಾಲ್ಲೂಕಿನ ಬೇವೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬೆಟ್ಟದ ತಿಮ್ಮಪ್ಪಸ್ವಾಮಿಯ ಬ್ರಹ್ಮ ರಥೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮುಜರಾಯಿ ಇಲಾಖೆಯ ಸೇವೆಯೊಂದಿಗೆ ನಡೆದ ರಥೋತ್ಸವಕ್ಕೆ ತಹಶೀಲ್ದಾರ್ ನರಸಿಂಹಮೂರ್‍ತಿ ಚಾಲನೆ ನೀಡಿದರು. ರಥವನ್ನು ಭಕ್ತರು ದೇವಸ್ಥಾನದ ಆವರಣದಲ್ಲಿ ಎಳೆದರು. ರಥಕ್ಕೆ ಭಕ್ತರು ಹಣ್ಣುಜವನ ಎಸೆದು ಭಕ್ತಿಭಾವ ಮೆರೆದರು. ರಥೋತ್ಸವದ ಅಂಗವಾಗಿ ವಸ್ತ್ರಾಲಂಕಾರ, ಗಜೋತ್ಸವ, ಗರುಡೋತ್ಸವ, ಕಲ್ಯಾಣೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ, ವಿದ್ಯುತ್ ದೀಪಾಲಂಕಾರ, ಬೆಳ್ಳಿಪಲ್ಲಕ್ಕಿ ಉತ್ಸವ, ಪಾನಕಸೇವೆ, ಬಾಣ-ಬಿರುಸು, ಸಿಡಿಮದ್ದು, ಅನ್ನ ಸಂತರ್‍ಪಣೆ, ಮಕ್ಕಳಿಗೆ ಹಾಲು ವಿತರಣೆ, ನೈವೇದ್ಯ, ಪ್ರಸಾದ ವಿನಿಯೋಗ ನಡೆಯಿತು.
ಕಲಾವಿದರಿಂದ ವಿವಿಧ ಜಾನಪದ ಹಾಗೂ ಸಾಂಸ್ಕೃತಿಕ ಕಾರ್‍ಯಕ್ರಮಗಳು, ಗಾಯಕರಿಂದ ಗೀತಗಾಯನ, ರಸಮಂಜರಿ ಕಾರ್‍ಯಕ್ರಮ ನಡೆಯಿತು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ರಥೋತ್ಸವದಲ್ಲಿ ಬೇವೂರು ಮಠದ ಮೃತ್ಯುಂಜಯ ಶಿವಾಚಾರ್‍ಯ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಬಿಎಂಐಸಿಪಿಐ ಅಧ್ಯಕ್ಷ ರಘುನಂದನ್ ರಾಮಣ್ಣ, ಕಸ್ತೂರಿ ಕರ್‍ನಾಟಕ ಜನಪರ ವೇದಿಕೆ ಜಿಲ್ಲಾ ಅಧ್ಯಕ್ಷ ಯೋಗೇಶ್ ಗೌಡ, ಮುಖಂಡ ಕರುಣ್ ಆನಂದ್, ದೇವಸ್ಥಾನದ ಮೇಲ್ವಿಚಾರಕ ಬಿ.ಸಿ.ಪುಟ್ಟಸ್ವಾಮಿ, ಅರ್‍ಚಕ ವೆಂಕಟೇಶ್, ಇತರರು ಭಾಗವಹಿಸಿದ್ದರು.
