ಉದಯವಾಹಿನಿ, ಮುಂಡರಗಿ: ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿನಿಂದ ನಿತ್ಯ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ನದಿಗೆ ಹರಿದುಹೋಗುತ್ತಿದೆ. ತಮ್ಮ ಪಾಲಿನ ನೀರು ವ್ಯರ್ಥವಾಗುತ್ತಿರುವ ಬಗ್ಗೆ ರೈತರು ಆಕ್ರೋಶ ಹೊರಹಾಕಿದ್ದಾರೆ.
ಹಮ್ಮಿಗಿ ಬ್ಯಾರೇಜಿನಲ್ಲಿ ಗರಿಷ್ಠ ಮೂರು ಟಿ.ಎಂ.ಸಿ ನೀರು ಸಂಗ್ರಹಿಸಿಕೊಳ್ಳಬಹುದು.
ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ಮುಂಡರಗಿ, ಲಕ್ಷ್ಮೇಶ್ವರ, ಶಿರಹಟ್ಟಿ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಕೊಪ್ಪಳ ಮೊದಲಾದ ನಗರ, ಪಟ್ಟಣ ಹಾಗೂ ನೂರಾರು ಗ್ರಾಮಗಳಿಗೆ ವರ್ಷಪೂರ್ತಿ ನಿರಾತಂಕವಾಗಿ ನೀರು ಒದಗಿಸಬಹುದು.
ಆದರೆ, ಶಿಂಗಟಾಲೂರ ಏತ ನೀರಾವರಿ ಯೋಜನೆಯಂತೆ ಬ್ಯಾರೇಜಿನ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ತಾಲ್ಲೂಕಿನ ಗುಮ್ಮಗೋಳ, ಬಿದರಳ್ಳಿ, ವಿಠಲಾಪುರ ಹಾಗೂ ಹೂವಿನಹಡಗಲಿ ತಾಲ್ಲೂಕಿನ ಅಲ್ಲಿಪುರ ಗ್ರಾಮಗಳನ್ನು ಸ್ಥಳಾಂತರಿಸದ ಕಾರಣ ನಿಗದಿಯಂತೆ ನೀರು ಸಂಗ್ರಹಿಸಲಾಗುತ್ತಿಲ್ಲ. 1.9 ಟಿಎಂಸಿ ನೀರು ಮಾತ್ರ ಸಂಗ್ರಹಿಸಿಕೊಳ್ಳಬಹುದಾಗಿದೆ.
ಶಿವಮೊಗ್ಗ, ಮಲೆನಾಡು ಹಾಗೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಹಲವು ದಿನಗಳಿಂದ ಸಾಕಷ್ಟು ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಅಕ್ಟೋಬರ್‌ 9ರಂದು 10,477 ಕ್ಯುಸೆಕ್, 10ರಂದು 21,965 ಕ್ಯುಸೆಕ್, 11ರಂದು 48,300 ಕ್ಯುಸೆಕ್, 12ರಂದು 46,580, ಕ್ಯುಸೆಕ್, 13ರಂದು 61,695 ಕ್ಯುಸೆಕ್ ಹಾಗೂ 14ರಂದು 29,841 ಕ್ಯುಸೆಕ್ ನೀರು ಬ್ಯಾರೇಜಿಗೆ ಹರಿದುಬಂದಿದೆ. ಅಷ್ಟೇ ಪ್ರಮಾಣದ ನೀರನ್ನು ನಿತ್ಯ ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!