ಉದಯವಾಹಿನಿ, ವೇಮಗಲ್: ಸಾಮಾನ್ಯವಾಗಿ ತರಕಾರಿ ಮಾರುಕಟ್ಟೆ ಎಂದರೆ ಹತ್ತಾರು ತರಕಾರಿ, ಹಣ್ಣು ಸೇರಿದಂತೆ ಇನ್ನಿತರ ಅಂಗಡಿಗಳು ಇರುತ್ತವೆ. ಆದರೆ, ವೇಮಗಲ್‌ನಲ್ಲಿರುವ ವಾರದ ಸಂತೆಯಲ್ಲಿ ಹಣ್ಣು, ತರಕಾರಿಗಳ ಜೊತೆಗೆ ಮಳೆ ಬಂದಾಗ ಕೆಸರನ್ನು ಮತ್ತು ಮಳೆ ಬಾರದೆ ಇದ್ದಾಗ ದೂಳನ್ನೂ ಕಾಣಬಹುದಾಗಿದೆ.ಪಟ್ಟಣದ ಹೃದಯ ಭಾಗದಲ್ಲಿರುವ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಸಂತೆಯನ್ನು ವರ್ಷದ ಹಿಂದೆ ಸೀತಿ ರಸ್ತೆಯ ಸಂತೆ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ಇಲ್ಲಿ ಕನಿಷ್ಠ ಮೂಲಸೌಕರ್ಯಗಳೇ ಇಲ್ಲ. ಜೊತೆಗೆ ಸಂತೆ ನಡೆಯುವ ಜಾಗದಲ್ಲಿ ಮಳೆ ಬಂದಾಗ ಕೆಸರಾಗದಂತೆ ಮತ್ತು ಬಿಸಿಲು ಇದ್ದಾಗ ದೂಳು ಉಂಟಾಗದಂತೆ ಕನಿಷ್ಠ ಬಂಡೆಗಲ್ಲು ಅಥವಾ ಕಾಂಕ್ರೀಟ್ ನೆಲಹಾಸನ್ನು ಮಾಡಿಲ್ಲ. ಇದರಿಂದಾಗಿ ಕೆಸರುಮಯವಾದ ಸ್ಥಳದಲ್ಲೇ ವಾರದ ಸಂತೆಯಲ್ಲಿ ವ್ಯಾಪಾರ-ವಹಿವಾಟು ನಡೆಸುವ ಅನಿವಾರ್ಯತೆ ಇದೆ ಎನ್ನುತ್ತಾರೆ ವರ್ತಕರು.

ಬಿಸಿಲು ಇದ್ದಾಗ ದೂಳಿನ ಜೊತೆಗೆ ಮತ್ತು ಮಳೆ ಬಂದಾಗ ಕೆಸರುಮಯವಾದ ರಸ್ತೆಯ ಪಕ್ಕದಲ್ಲೇ ವರ್ತಕರು ತರಕಾರಿ ಮಾರಾಟದಲ್ಲಿ ತೊಡಗುತ್ತಾರೆ. ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಇಲ್ಲಿ ನಡೆದಾಡಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ಇದೆ. ಅಲ್ಲದೆ, ಒಂದು ಕ್ಷಣ ಮೈಮರೆತರೂ ಕಾಲು ಜಾರಿ ಬೀಳುವುದು ಖಚಿತ ಎಂದು ವರ್ತಕರು ಬೇಸರ ವ್ಯಕ್ತಪಡಿಸುತ್ತಾರೆ. ಇದರಿಂದಾಗಿ ಜನರು ಸ್ಥಳೀಯ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಮಳೆಯಿಂದ ಕೆಸರುಮಯವಾಗುವ ಸಂತೆಯೊಳಗೆ ಹೋಗಲು ಇಷ್ಟಪಡದ ಕೆಲವರು, ಸೀತಿ ಮುಖ್ಯ ರಸ್ತೆಯ ಪಕ್ಕದಲ್ಲೇ ಅಂಗಡಿ-ಮುಂಗಟ್ಟುಗಳನ್ನು ಹಾಕುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಜೊತೆಗೆ ಸಮೀಪವೇ ಸರ್ಕಾರಿ ಆಸ್ಪತ್ರೆ ಇದ್ದು, ಸಂತೆಯ ದಿನ ಈ ಮಾರ್ಗವಾಗಿ ಆಸ್ಪತ್ರೆಗೆ ಹೋಗುವವರು ಪರದಾಡುವಂತಾಗಿದೆ ಎಂಬುದು ಸ್ಥಳೀಯರ ದೂರು.

Leave a Reply

Your email address will not be published. Required fields are marked *

error: Content is protected !!