ಉದಯವಾಹಿನಿ, ಹುಲಸೂರ: ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ಜೈ ಭವಾನಿ ದೇವಿಯ ಅಂಬಾರಿಯನ್ನು ಹೊತ್ತ ಆನೆಯು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಹೊರಟ ಮೆರವಣಿಗೆ ಗ್ರಾಮದ ಬೀದಿ – ಬೀದಿಗಳಲ್ಲಿ ಸಂಚರಿಸಿ 77 ನೇ ವರ್ಷದ ಪಲ್ಲಕ್ಕಿ ಉತ್ಸವ ಗುರುವಾರ ತೆರೆಕಂಡಿತು.
ಕಾರ್ಯಕ್ರಮಕ್ಕೆ ಶಾಸಕ ಶರಣು ಸಲಗರ ಚಾಲನೆ ನೀಡಿ ಮಾತನಾಡಿ, ‘ಜೈ ಭವಾನಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ.
ಮೈಸೂರಿನಲ್ಲಿ ನಡೆಯುವ ದಸರಾ ಮೆರವಣಿಗೆ ರೀತಿಯೇ ನಮ್ಮ ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ಆನೆ ಮೇಲೆ ಅಂಬಾರಿ ಮೆರವಣಿಗೆ ನಡೆಯುತ್ತಿರುವುದು ಈ ಭಾಗದ ಜನರ ಪುಣ್ಯವಾಗಿದೆ. ಆ ದೇವಿಯ ಸಕಲ ಭಕ್ತರ ಕಷ್ಟವನ್ನು ಪರಿಹರಿಸಿ ಮಳೆ ಬೆಳೆ ನೀಡಿ ಆಶೀರ್ವದಿಸಲಿ ಎಂದರು.ಅಂಬಾರಿ ಉತ್ಸವದ ಅಂಗವಾಗಿ ದೇವಿಗೆ ವಿಶೇಷ ಹೂವು ಮತ್ತು ಚಿನ್ನಾಭರಣಗಳಿಂದ ಅಲಂಕಾರ ಮಾಡಿ ಉತ್ಸವ ಮೂರ್ತಿಯನ್ನು ಆನೆಯ ಮೇಲೆ ಸಿದ್ದಗೊಳಿಸಿದ್ದ ಅಂಬಾರಿಗೆ ಕೊಂಡೊಯ್ಯಲಾಯಿತು. ಮೆರವಣಿಗೆಯನ್ನು ನೋಡಲು ಭಕ್ತಾದಿಗಳು ದೂರದ ಊರುಗಳಿಂದ ಆಗಮಿಸಿ ಸಂಬಂಧಿಕರ ಮನೆಯಲ್ಲಿ ಹಾಗೂ ದೇವಾಲಯದ ಆವರಣದಲ್ಲಿ ಬೀಡು ಬಿಟ್ಟಿದ್ದರು.
ವಿಶೇಷ ಆಕರ್ಷಣೆ : ಆನೆಯ ಮೇಲೆ ಅಮ್ಮನವರ ಮೆರವಣಿಗೆ ಜತೆಯಲ್ಲಿ ವೀರಗಾಸೆ ಕುಣಿತ, ಕೇರಳದ ಚಂಡಿ ವಾದ್ಯ, ಮಹಾರಾಷ್ಟ್ರದ ಡೋಲ ತಾಷಾ ವಾದ್ಯ, ಮೈಸೂರಿನ ನಂದಿ ಧ್ವಜ, ಸೋಮನ ಕುಣಿತ, ತಮಟೆ, ಮಂಡ್ಯದ ಪೂಜಾ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಟ್ಟಿಗೆ ಆನೆಯ ಮೆರವಣಿಗೆ ಸಾಗಿತು. ಈ ವೇಳೆ ಅನ್ನದಾಸೋಹ ಸೇರಿ ಇನ್ನೂ ಅನೇಕ ಕಾರ್ಯಕ್ರಮಗಳು ನಡೆದವು.
