ಉದಯವಾಹಿನಿ, ಕೋಲಾರ : ರಾಜ್ಯ ಸರ್ಕಾರದ ನಿಗಮಗಳಲ್ಲಿ ಹಗರಣ ನಡೆದಿದ್ದು ತನಿಖೆ ನಡೆಸಬೇಕು. ಮುಡಾ ಹಗರಣವನ್ನು ಸಿಬಿಐಗೆ ವಹಿಸಬೇಕು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆಗ್ರಹಿಸಿದರು.
ನಗರ ಹೊರವಲಯದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಡಾದಲ್ಲಿ ೫ ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಮುಡಾ ಕಚೇರಿಯಲ್ಲಿ ಇ.ಡಿ ದಾಳಿ ನಡೆದಿದ್ದು, ಸರಿಯಾಗಿ ದಾಖಲೆ ನೀಡುತ್ತಿಲ್ಲ. ತನಿಖೆಗೆ ಅಡ್ಡಿಪಡಿಸುತ್ತಿರುವ ಮುಖ್ಯಮಂತ್ರಿ ಅಧಿಕಾರದಲ್ಲಿ ಇರಬಾರದು ಎಂದರು.
ಭ್ರಷ್ಟ ಕಾಂಗ್ರೆಸ್ ಸರ್ಕಾರ ಇದು. ಕೇಂದ್ರ ಸರ್ಕಾರ ಇ.ಡಿ, ಸಿಬಿಐ ಯನ್ನು ದುರ್ಬಳಕೆ ಮಾಡುತ್ತಿದೆ ಎಂಬುದಾಗಿ ಸಚಿವರು ಟೀಕಿಸುತ್ತಿದ್ದಾರೆ. ಈ ರೀತಿ ಸಿದ್ದರಾಮಯ್ಯ ಹೇಳಿಸುತ್ತಿದ್ದಾರೆ ಎಂದು ಆರೋಪಿಸಿದರು. ಮುಡಾ ನಿವೇಶನನಕ್ಕೂ ತಮಗೂ ಸಂಬಂಧ ಇಲ್ಲವೆಂದ ಸಿದ್ದರಾಮಯ್ಯ ೬೫ ಕೋಟಿ ರೂಪಾಯಿ ಕೊಟ್ಟರೆ ಬಿಟ್ಟುಕೊಡುವುದಾಗಿ ಹೇಳಿದ್ದು ಏಕೆ, ದಾಖಲೆಗಳನ್ನು ವೈಟ್ನರ್ ಹಾಕಿ ತಿದ್ದುಪಡಿ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.
ಪ್ರಾಸಿಕ್ಯೂಷನ್ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಸರಿ ಇದೆ ಎಂದು ನ್ಯಾಯಾಲಯ ಕೂಡ ಹೇಳಿದೆ. ಭ್ರಷ್ಟಾಚಾರ ಮಾಡಿಲ್ಲ ಎನ್ನುವುದಾದರೆ ನಿವೇಶನ ಏಕೆ ವಾಪಸ್ ಮಾಡಿದ್ದೀರಿ ಎಂದು ಕೇಳಿದರು. ಮುಡಾ ಅಧ್ಯಕ್ಷ ಮರೀಗೌಡ ರಾಜೀನಾಮೆ ನೀಡಿದ್ದಾರೆ. ಆದರೆ, ರಾಜೀನಾಮೆ ನೀಡಲು ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದರು. ಇದು ಇಂಡಿಯನ್ ನ್ಯಾಷನಲ್ ಕರಪ್ಷನ್ ಪಾರ್ಟಿ. ೬೦ ವರ್ಷ ದಾಳಿ ಮಾಡಿದ್ದರಲ್ಲಿ ಕಾಂಗ್ರೆಸ್ ಪಾತ್ರವಿತ್ತೇ ಎಂದು ತಿರುಗೇಟು ನೀಡಿದರು.
